ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ಪ್ರವೀಣ್ ನೆಟ್ಟಾರು
ಹೊಸದಿಲ್ಲಿ: ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ರಹ್ಮಾನ್ ನನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಶುಕ್ರವಾರ ಬಂಧಿಸಿದೆ.
ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ರಹ್ಮಾನ್ ಶುಕ್ರವಾರ ಖತರ್ ನಿಂದ ಕೇರಳದ ಕಣ್ಣೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಆತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಇನ್ನೋರ್ವ ಮುಖ್ಯ ಆರೋಪಿ ಆತೀಕ್ ಅಹ್ಮದ್ ಅನ್ನು ಈ ವರ್ಷದ ಜನವರಿಯಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.
ಈ ಪ್ರಕರಣದ ಮುಖ್ಯ ಆರೋಪಿಯೆಂದು ಗುರುತಿಸಲಾದ ಮುಸ್ತಾಫಾ ಪೈಚಾರ್ ಗೆ ಆತೀಕ್ ಆಶ್ರಯ ನೀಡಿದ್ದ ಹಾಗೂ ನೆರವಾಗಿದ್ದನೆಂದು ಎನ್‌ಐಎ ತಿಳಿಸಿದೆ.
ಪ್ರಕರಣದ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆಯೆಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಮುಖಂಡರಾದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಮಾರಾಕಾಯುಧಗಳಿಂದ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು.