ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ : ಇಬ್ಬರು ಶಾರ್ಪ್ ಶೂಟರ್ ಗಳು ಸೇರಿದಂತೆ ಮೂವರ ಬಂಧನ
Photo: indiatodayne.in
ಹೊಸದಿಲ್ಲಿ: ಶನಿವಾರ ತಡರಾತ್ರಿ ರಾಜಸ್ಥಾನ ಪೋಲಿಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ದಿಲ್ಲಿ ಪೋಲಿಸ್ ಕ್ರೈಂ ಬ್ರ್ಯಾಂಚ್ ತಂಡವು ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ ಸಿಂಗ್ ಗೊಗಾಮೆದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಇಬ್ಬರು ಶಾರ್ಪ್ ಶೂಟರ್ಗಳು ಸೇರಿದಂತೆ ಮೂವರನ್ನು ಚಂಡಿಗಡದಲ್ಲಿ ಬಂಧಿಸಿದೆ.
ಡಿ.5ರಂದು ಗೊಗಾಮೆದಿಯವರನ್ನು ರಾಜಸ್ಥಾನದ ಜೈಪುರದಲ್ಲಿಯ ಅವರ ನಿವಾಸದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ದುಷ್ಕರ್ಮಿಗಳು ಗೊಗಾಮೆದಿ ಮೇಲೆ ಗುಂಡು ಹಾರಿಸುತ್ತಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಇತ್ತೀಚಿಗೆ ಬಹಿರಂಗಗೊಂಡಿದ್ದವು.
ಇಬ್ಬರು ಆರೋಪಿತ ಹಂತಕರನ್ನು ಜೈಪುರದ ರೋಹಿತ ರಾಠೋಡ್ ಮತ್ತು ಹರ್ಯಾಣದ ಮಹೇಂದ್ರಗಡ ನಿವಾಸಿ ನಿತಿನ್ ಫೌಝಿ ಎಂದು ಗುರುತಿಸಿದ್ದ ಪೋಲೀಸರು ಅವರ ಬಗ್ಗೆ ಸುಳಿವುಗಳನ್ನು ನೀಡುವವರಿಗೆ ಐದು ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿದ್ದರು.
ಆರೋಪಿತ ಹಂತಕರ ಜೊತೆಯಲ್ಲಿದ್ದ ಉಧಮ ಸಿಂಗ್ ಎಂಬಾತನನ್ನೂ ಪೋಲಿಸರು ಬಂಧಿಸಿದ್ದು, ಮುಂದಿನ ವಿಚಾರಣೆಗಾಗಿ ಬಂಧಿತರನ್ನು ಜೈಪುರ ಪೋಲಿಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ದಿಲ್ಲಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಶನಿವಾರ ಗೊಗಾಮೆದಿಯ ಹತ್ಯೆಗಾಗಿ ಸುಪಾರಿ ನೀಡಿದ್ದ ಆರೋಪದಲ್ಲಿ ರಾಮವೀರ ಜಾಟ್ ಎಂಬಾತನನ್ನು ಜೈಪುರದಲ್ಲಿ ಪೋಲಿಸರು ಬಂಧಿಸಿದ್ದರು.
ಗೊಗಾಮೆದಿಯವರನ್ನು ಭೇಟಿಯಾಗುವ ನೆಪದಲ್ಲಿ ಅವರ ನಿವಾಸವನ್ನು ಪ್ರವೇಶಿಸಿದ್ದ ಆರೋಪಿಗಳು ಕೆಲವು ನಿಮಿಷಗಳ ಕಾಲ ಮಾತನಾಡಿದ ಬಳಿಕ ಅವರತ್ತ ಗುಂಡುಗಳನ್ನು ಹಾರಿಸಿದ್ದರು ಎಂದು ಪೋಲಿಸರು ತಿಳಿಸಿದರು.
ಗೊಗಾಮೆದಿ ನಿವಾಸವನ್ನು ಪ್ರವೇಶಿಸಲು ನೆರವಾಗಿದ್ದ ತಮ್ಮ ಸಹಚರ ನವೀನ್ ಶೇಖಾವತ್ ಎಂಬಾತನನ್ನೂ ಆರೋಪಿಗಳು ಹತ್ಯೆಗೈದಿದ್ದರು.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನೊಂದಿಗೆ ಗುರುತಿಸಿಕೊಂಡಿರುವ ಗ್ಯಾಂಗ್ಸ್ಟರ್ ರೋಹಿತ್ ಗೋದರಾ ಕೊಲೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದು, ಗೊಗಾಮೆದಿ ತನ್ನ ಶತ್ರುಗಳನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದ್ದ.