ಕೋಲ್ಕತ್ತಾ | ಮೂವರು ಮಹಿಳೆಯರ ಆತ್ಮಹತ್ಯೆ ಪ್ರಕರಣಕ್ಕೆ ತಿರುವು : ಕೊಲೆ ಸಾಧ್ಯತೆ ಬಗ್ಗೆ ಉಲ್ಲೇಖಿಸಿದ ಮರಣೋತ್ತರ ಪರೀಕ್ಷೆ ವರದಿ
PC : NDTV
ಕೋಲ್ಕತ್ತಾ: ಬುಧವಾರ ಇಡೀ ನಗರವನ್ನೇ ತಲ್ಲಣಗೊಳಿಸಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಬಾಲಕಿಯ ಸಾವು ಆತ್ಮಹತ್ಯೆಯ ಬದಲು ಹತ್ಯೆಯಾಗಿರಬಹುದು ಎಂದು ಮರಣೋತ್ತರ ಪರೀಕ್ಷಾ ವರದಿಗಳು ಸೂಚಿಸುತ್ತಿವೆ ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ಇಬ್ಬರು ಸಹೋದರರನ್ನು ವಿವಾಹವಾಗಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಸಹೋದರನ ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ನಡುವೆ, ಆ ಮಹಿಳೆಯರ ಗಂಡಂದಿರು ಹಾಗೂ ಸಹೋದರನೊಬ್ಬನ ಪುತ್ರ ಕಾರು ಅಪಘಾತವೊಂದರಲ್ಲಿ ಭಾಗಿಯಾಗಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ, ನಾವು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೆವು ಎಂದು ಅವರು ಹೇಳಿಕೆ ನೀಡಿದ್ದರು.
ಬುಧವಾರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ನಗರದ ಒಂದು ಭಾಗವನ್ನು ಸುತ್ತುವರಿದಿರುವ ವರ್ತುಲ ರಸ್ತೆಯ ಪೂರ್ವ ಮಹಾನಗರ ಬೈಪಾಸ್ ನ ಅಭಿಷಿಕ್ತ ಕ್ರಾಸಿಂಗ್ ಬಳಿ ನಡೆದಿದ್ದ ಕಾರು ಅಪಘಾತದಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಬಾಲಕ ಭಾಗಿಯಾಗಿದ್ದದ್ದು ಪತ್ತೆಯಾದ ನಂತರ, ಈ ಮೂವರು ಮಹಿಳೆಯರ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪೈಕಿ ಓರ್ವ ವ್ಯಕ್ತಿ, ನಾವು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆವು ಹಾಗೂ ಉದ್ದೇಶಪೂರ್ವಕವಾಗಿ ಮೆಟ್ರೊ ಪಿಲ್ಲರ್ ಗೆ ಕಾರನ್ನು ಗುದ್ದಿಸಿದ್ದೆವು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದ. ಅಲ್ಲದೆ, ಅದಾಗಲೇ ಮೃತಪಟ್ಟಿದ್ದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಿದ್ದ.
ನಂತರ, ತಂಗ್ರಾದಲ್ಲಿನ ಅವರ ನಿವಾಸಕ್ಕೆ ತೆರಳಿದ್ದ ಪೊಲೀಸರು, ಮೃತದೇಹಗಳನ್ನು ವಶಪಡಿಸಿಕೊಂಡು, ವಿಧಿವಿಜ್ಞಾನ ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ತನಿಖೆ ಕೈಗೊಂಡಿದ್ದರು. ಈ ವೇಳೆ ಎಲ್ಲ ಮೂರು ಮೃತದೇಹಗಳು ಬೇರೆ ಬೇರೆ ಕೊಠಡಿಗಳಲ್ಲಿ ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟಿದ್ದ ಮಹಿಳೆಯರ ಮಣಿಕಟ್ಟು ಸೀಳಿರುವುದು ಈ ಸಂದರ್ಭದಲ್ಲಿ ಕಂಡು ಬಂದಿತ್ತು. ಆದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅವರಿಗೆ ಬೇರೆ ಗಾಯಗಳಾಗಿರುವುದೂ ಬೆಳಕಿಗೆ ಬಂದಿತ್ತು. ಇಬ್ಬರೂ ಮಹಿಳೆಯರ ಕತ್ತನ್ನು ಸೀಳಲಾಗಿತ್ತು ಹಾಗೂ ತೀವ್ರ ರಕ್ತಸ್ರಾವದ ನಂತರ ಅವರಿಬ್ಬರು ಮೃತಪಟ್ಟಿದ್ದರು. 14 ವರ್ಷದ ಬಾಲಕಿಯ ಎದೆ, ಕಾಲುಗಳು, ತುಟಿಗಳು ಹಾಗೂ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆಕೆಗೆ ವಿಷಪ್ರಾಶನವನ್ನೂ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ.
ತಂಗ್ರಾದಲ್ಲಿನ ನಿವಾಸವೊಂದರಲ್ಲಿ ಸಹೋದರರಾದ ಪ್ರಣಯ್ ಹಾಗೂ ಪ್ರಸೂನ್ ರಾಯ್ ತಮ್ಮ ಪತ್ನಿಯರಾದ ಸುದೇಶ್ನ ಹಾಗೂ ರೋಮಿ ರಾಯ್ ರೊಂದಿಗೆ ವಾಸಿಸುತ್ತಿದ್ದರು. ಈ ಪೈಕಿ ಪ್ರಣಯ್ ಹಾಗೂ ಸುದೇಶ್ನ ದಂಪತಿಗೆ ಪ್ರತೀಕ್ ಎಂಬ ಪುತ್ರನಿದ್ದರೆ, ಪ್ರಸೂನ್ ಹಾಗೂ ರೋಮಿ ದಂಪತಿಗೆ ಪ್ರಿಯಾಂಬದ ಎಂಬ ಪುತ್ರಿಯಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಚರ್ಮೋದ್ಯಮವನ್ನು ನಡೆಸುತ್ತಿದ್ದ ಈ ಕುಟುಂಬವು ಹಣಕಾಸು ಸಮಸ್ಯೆಗೆ ಸಿಲುಕಿತ್ತು ಎಂದು ಹೇಳಿರುವ ಪೊಲೀಸರು, ಇದೊಂದು ಹತ್ಯೆ-ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.