ಮುಂಬೈನ ಆಡಿಷನ್ ಒತ್ತೆಯಾಳು ಪ್ರಕರಣದ ಭಯಾನಕತೆಯನ್ನು ಬಿಚ್ಚಿಟ್ಟ ರೋಹಿತ್ ಆರ್ಯ ಸಹೋದ್ಯೋಗಿ
Photo Credit : indiatoday.in
ಮುಂಬೈ: ಇಲ್ಲಿನ ಪೊವೈನ RA ಸ್ಟುಡಿಯೊದಲ್ಲಿ ದೈನಂದಿನ ಮಕ್ಕಳ ಆಡಿಷನ್ ಆಗಿ ಪ್ರಾರಂಭಗೊಂಡಿದ್ದ ಗುರುವಾರ, ನೋಡನೋಡುತ್ತಿದ್ದಂತೆಯೇ ನಂಬಲಸಾಧ್ಯವಾದ ರೀತಿಯಲ್ಲಿ 17 ಮಕ್ಕಳ ಭಯಾನಕ ಒತ್ತೆಯಾಳು ಘಟನೆಯಾಗಿ ರೂಪಾಂತರಗೊಂಡಿತ್ತು.
‘ಲೆಟ್ಸ್ ಚೇಂಜ್ 4’ ಎಂಬ ಶೀರ್ಷಿಕೆ ಹೊಂದಿದ್ದ ಯೋಜನೆಯ ಆಡಿಷನ್ ನಲ್ಲಿ ಭಾಗವಹಿಸಲು 17 ಮಕ್ಕಳು RA ಸ್ಟುಡಿಯೊಗೆ ಆಗಮಿಸಿದ್ದರು. ಈ ವೇಳೆ ಸ್ಟುಡಿಯೊದಲ್ಲಿ ಚಟುವಟಿಕೆಯ ವಾತಾವಣವಿತ್ತು. ಸ್ಕ್ರಿಪ್ಟ್ ತಯಾರಿಯ ತರಾತುರಿಯಿಂದ ಕೂಡಿತ್ತು.
ಆದರೆ, ಕೆಲವೇ ಕ್ಷಣಗಳಲ್ಲಿ ಈ ಆಡಿಷನ್ ಹಿಂದಿನ ವ್ಯಕ್ತಿಯಾಗಿದ್ದ ಚಿತ್ರ ನಿರ್ಮಾಪಕ ಹಾಗೂ ಹೋರಾಟಗಾರ ರೋಹಿತ್ ಆರ್ಯ ಅತ್ಯಂತ ಅನಿರೀಕ್ಷಿತವಾಗಿ ನಗರದ ಒತ್ತೆಯಾಳುಗಳನ್ನಿರಿಸಿಕೊಂಡ ವ್ಯಕ್ತಿಯಾಗಿ ರೂಪಾಂತರಗೊಂಡಿದ್ದರು. ಕಳೆದ ಮೂರು ದಿನಗಳಿಂದ ಸ್ಟುಡಿಯೊದಲ್ಲಿ ಮಕ್ಕಳು ನಟನೆಯ ಅವಧಿಯಲ್ಲಿ ಪಾಲ್ಗೊಳ್ಳುತ್ತಿದ್ದುದರಿಂದ, ಯಾರಿಗೂ ಅಪಾಯದ ಅನುಮಾನ ಮೂಡಿರಲಿಲ್ಲ. ಅಲ್ಲಿದ್ದವರ ಪೈಕಿ ಈ ಒತ್ತೆಯಾಳು ಪ್ರಕರಣವನ್ನು ಸುಖಾಂತ್ಯಗೊಳಿಸಲು ಪೊಲೀಸರಿಗೆ ನೆರವು ನೀಡಿದ ರೋಹಿತ್ ಆರ್ಯ ನ ಯೋಜನಾ ಸಮನ್ವಯಕಾರ ರೋಹನ್ ಆಹೇರ್ ಕೂಡಾ ಸೇರಿದ್ದರು.
ರೋಹನ್ ಅಹೇರ್ ಅವರು ರೋಹಿತ್ ಆರ್ಯ ನ ‘ಲೆಟ್ಸ್ ಚೇಂಜ್’ ಯೋಜನೆಯ ಎರಡು ಭಾಗಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಸೃಜನಾತ್ಮಕ ಭಿನ್ನಾಭಿಪ್ರಾಯದಿಂದ, ಮೂರನೆ ಭಾಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ರೋಹನ್ ಅಹೇರ್ ನನ್ನು ಸಂಪರ್ಕಿಸಿದ್ದ ರೋಹಿತ್ ಆರ್ಯ, ನಮ್ಮ ಹಿಂದಿನ ಭಿನ್ನಾಭಿಪ್ರಾಯಗಳು ಮುಗಿದ ಅಧ್ಯಾಯ ಎಂದು ಅವರಿಗೆ ಭರವಸೆ ನೀಡಿದ್ದ ಎನ್ನಲಾಗಿದೆ.
“ಇದು ಲೆಟ್ಸ್ ಚೇಂಜ್ 4 ಯೋಜನೆಯಾಗಿದ್ದು, ಮೊದಲೆರಡು ಭಾಗಗಳಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ” ಎಂದು ರೋಹಿತ್ ಆರ್ಯ ಅವರು ರೋಹನ್ ಅಹೇರ್ ಮನವೊಲಿಸಿದ್ದರಂತೆ. “ಸ್ಕ್ರಿಪ್ಟ್ ಇನ್ನೂ ಅಂತಿಮಗೊಳ್ಳಬೇಕಿದ್ದು, ಮೊದಲು ನಾವು ಆಡಿಷನ್ ಹಮ್ಮಿಕೊಳ್ಳೋಣ ಎಂದು ರೋಹಿತ್ ಆರ್ಯ ನನಗೆ ತಿಳಿಸಿದ್ದರು. ಅವರೇ ಪೋಷಕರು ಹಾಗೂ ಮಕ್ಕಳಿಗೆ ವೈಯಕ್ತಿಕವಾಗಿ ಸಂದೇಶ ರವಾನಿಸಿದ್ದರು” ಎಂದು ಸ್ಮರಿಸುತ್ತಾರೆ ರೋಹನ್ ಅಹೇರ್.
ಆದರೆ, ಗುರುವಾರದಂದು ಸಹಜತೆಗಿಂತ ವ್ಯತಿರಿಕ್ತ ವಾತಾವರಣ RA ಸ್ಟುಡಿಯೊದಲ್ಲಿ ಕಂಡು ಬಂದಿತ್ತು. ಇದನ್ನು ಮೊದಲು ಗ್ರಹಿಸಿದ್ದು ರೋಹನ್ ಅಹೇರ್. ಹೀಗಾಗಿ, ಉದ್ವಿಗ್ನತೆ ಹೆಚ್ಚಾಗುವುದಕ್ಕೂ ಮುನ್ನವೇ, ಈ ಕುರಿತು ಪೋಷಕರನ್ನು ಗೋಪ್ಯವಾಗಿ ಎಚ್ಚರಿಸಿದ್ದ ರೋಹನ್ ಅಹೇರ್, ಒತ್ತೆಯಾಳು ಪ್ರಕರಣ ಪ್ರಾರಂಭಗೊಂಡಾಗ, ಅವರ ರಕ್ಷಕರಾಗಿ ನಿಂತು, ರಕ್ಷಣಾ ಕಾರ್ಯಾಚರಣೆಯ ಕೇಂದ್ರ ಬಿಂದುವಾಗಿ ಕೆಲಸ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ರೋಹನ್ ಅಹೇರ್, “ನಾನು ಪೊಲೀಸರ ಸಂಪರ್ಕದಲ್ಲಿದ್ದೆ. ಅವರು ನಾವು ಸ್ಟುಡಿಯೊ ಒಳಗೆ ಪ್ರವೇಶಿಸಲು ಸಿದ್ಧರಿದ್ದೇವೆ ಎಂದು ನನಗೆ ತಿಳಿಸಿದ್ದರು” ಎಂದು ಹೇಳುತ್ತಾರೆ. “ನಾನು ಬೃಹತ್ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಒಡೆದು, ಪೊಲೀಸರು ಸ್ಟುಡಿಯೊ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟೆ. ಬಳಿಕ ರೋಹಿತ್ ಆರ್ಯ ನನ್ನತ್ತ ಪೆಪ್ಪರ್ ಸ್ಪ್ರೇ ಸಿಂಪಡಿಸಿದರು. ಸ್ಟುಡಿಯೊ ಹಿಂಬದಿಯಿಂದ ಪೊಲೀಸರು ಒಳಗೆ ಪ್ರವೇಶಿಸುವ ಹೊತ್ತಿನಲ್ಲಿ ನಾನು ಮಕ್ಕಳನ್ನು ಸುರಕ್ಷತೆಗಾಗಿ ಸ್ಟುಡಿಯೊ ಒಳಗೆ ಕೂಡಿ ಹಾಕಿದ್ದೆ. ಬಳಿಕ, ಕಮಾಂಡೊಗಳು ಸ್ಟುಡಿಯೊ ಒಳಗೆ ಪ್ರವೇಶಿಸಿದರು” ಎಂದು ಅವರು ಸ್ಮರಿಸುತ್ತಾರೆ.
“ಒಂದು ವೇಳೆ ಮಕ್ಕಳನ್ನು ಬಿಡುಗಡೆ ಮಾಡಿದರೆ, ನಾವು ನಿಮ್ಮ ಅಹವಾಲುಗಳನ್ನು ಆಲಿಸಲು ಸಿದ್ಧರಿದ್ದೇವೆ ಎಂದು ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ರೋಹಿತ್ ಆರ್ಯ ಜೊತೆ ಸಂಧಾನ ನಡೆಸಿದರು. ಆದರೆ, ಅದಕ್ಕೆ ನಿರಾಕರಿಸಿದ ರೋಹಿತ್ ಆರ್ಯ, ಮಕ್ಕಳನ್ನು ಜೀವಂತವಾಗಿ ದಹಿಸುವುದಾಗಿ ಬೆದರಿಕೆ ಒಡ್ಡಿದರು” ಎಂದು ರೋಹನ್ ಅಹೇರ್ ಹೇಳುತ್ತಾರೆ.
ಅಂತಿಮವಾಗಿ, ಕಮಾಂಡೊಗಳು ಸಣ್ಣ ಸ್ನಾನಗೃಹದ ಪ್ರವೇಶ ದ್ವಾರದ ಮೂಲಕ ಸ್ಟುಡಿಯೊ ಒಳಗೆ ಪ್ರವೇಶಿಸಿದ್ದಾರೆ. 35 ನಿಮಿಷಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲ 17 ಮಕ್ಕಳನ್ನೂ ಯಾವುದೇ ಅಪಾಯವಾಗದಂತೆ ಅವರು ರಕ್ಷಿಸಿದ್ದಾರೆ.
ಏರ್ ಗನ್, ರಾಸಾಯನಿಕಗಳು ಹಾಗೂ ಲೈಟರ್ ನೊಂದಿಗೆ ರೋಹಿತ್ ಆರ್ಯ ಸಜ್ಜಾರಾಗಿದ್ದರು. ಬಳಿಕ, ಅವೆಲ್ಲವನ್ನೂ ಸ್ಟುಡಿಯೊದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೋಹಿತ್ ಆರ್ಯ ಜೊತೆ ಸಂಧಾನ ಮಾತುಕತೆ ಮುರಿದು ಬಿದ್ದ ನಂತರ, ರೋಹಿತ್ ಆರ್ಯ ಬಂದೂಕಿನಂಥ ಆಯುಧದಿಂದ ಕಮಾಂಡೊಗಳತ್ತ ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ಕಮಾಂಡೊಗಳೂ ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ರೋಹಿತ್ ಆರ್ಯರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಸೌಜನ್ಯ: indiatoday.in