×
Ad

ಸಾಲ ವಂಚನೆ ಪ್ರಕರಣ: ಅನಿಲ್ ಅಂಬಾನಿ ವಿರುದ್ಧ ಈಡಿ ಲುಕೌಟ್ ನೋಟಿಸ್

Update: 2025-08-02 07:45 IST

PC: PTI

ಹೊಸದಿಲ್ಲಿ: ರಿಲಯನ್ಸ್ ಎಡಿಎಜಿ ಮುಖ್ಯಸ್ಥ ಅನಿಲ್ ಅಂಬಾನಿ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ಶುಕ್ರವಾರ ಲುಕೌಟ್ ನೋಟಿಸ್ ಹೊರಡಿಸಿದೆ. ರಿಲಯನ್ಸ್ ಉದ್ಯಮದಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 5ರಂದು ವಿಚಾರಣೆಗಾಗಿ ಅವರನ್ನು ಕೇಂದ್ರ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ಹಲವು ಏಜೆನ್ಸಿಗಳು ನಡೆಸಿದ ತನಿಖೆಯ ಹಿನ್ನೆಲೆಯಲ್ಲಿ ಈ ಸಮನ್ಸ್ ನೀಡಲಾಗಿದೆ.

ಶುಕ್ರವಾರ ಕೂಡಾ ನಿರ್ದೇಶನಾಲಯ ಭುವನೇಶ್ವರದ ಮೂರು ಕಡೆ ಹಾಗೂ ಕೊಲ್ಕತ್ತಾದ ಒಂದು ಕಡೆ ಶೋಧ ಕಾರ್ಯಾಚರಣೆ ನಡೆಸಿದೆ. ಭಾರತದ ಸೌರ ವಿದ್ಯುತ್ ನಿಗಮಕ್ಕೆ Reliance NU BESS Ltd ಹಾಗೂ ಮಹಾರಾಷ್ಟ್ರ ಎನರ್ಜಿ ಜನರೇಶನ್ ಕಾರ್ಪೊರೇಷನ್ ಹೆಸರಿನಲ್ಲಿ 68 ಕೋಟಿ ರೂಪಾಯಿ ನಕಲಿ ಬ್ಯಾಂಕ್ ಗ್ಯಾರೆಂಟಿ ನೀಡಿದ್ದಕ್ಕೆ ಪುರಾವೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಎಡಿಎಜಿ ಜತೆ ಸಂಬಂಧ ಹೊಂದಿದ್ದ ಭುವನೇಶ್ವರದಲ್ಲಿ ನೋಂದಾಯಿಸಲ್ಪಟ್ಟ ನಕಲಿ ಸಂಸ್ಥೆಯೊಂದು ಈ ಗ್ಯಾರೆಂಟಿ ಸೃಷ್ಟಿಸಿತ್ತು ಎನ್ನಲಾಗಿದೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಎಡಿಎಜಿ, "ಕಂಪನಿ ಹಾಗೂ ಸಹ ಸಂಸ್ಥೆಗಳು ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸಿದ್ದು, ವಂಚನೆ, ನಕಲು ಮತ್ತು ಮೋಸದ ಪಿತೂರಿಯ ಬಲಿಪಶುವಾಗಿದೆ" ಎಂದು ಹೇಳಿಕೆ ನೀಡಿದೆ.

ಹಲವು ಕೋಟಿ ರೂಪಾಯಿ ವ್ಯವಹಾರಗಳನ್ನು ಒಳಗೊಂಡ, ಈ ಹಿಂದೆ ಬಹಿರಂಗವಾಗದ ಹಲವು ಬ್ಯಾಂಕ್ ಖಾತೆಗಳು ನಿರ್ದೇಶನಾಲಯದ ಕಾರ್ಯಾಚರಣೆ ವೇಳೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮೂಹದ ಪ್ರಮುಖರು ಟೆಲಿಗ್ರಾಂ ಆ್ಯಪ್ ನಲ್ಲಿ 'ಅದೃಶ್ಯವಾಗುವ ಸಂದೇಶ' ಆಯ್ಕೆಯನ್ನು ಸಕ್ರಿಯಗೊಳಿಸಿ ಕಾರ್ಯಾಚರಣೆ ಮಾಡುತ್ತಿದ್ದರು. ಇದು ಸಂವಹನವನ್ನು ಮುಚ್ಚಿ ಹಾಕಲು ನಡೆಸಿದ ಪ್ರಯತ್ನವನ್ನು ತೋರಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News