×
Ad

ಹೊಸ ಕಾನೂನು ವಿರೋಧಿಸಿ ಟ್ರಕ್‌ ಚಾಲಕರ ಪ್ರತಿಭಟನೆ: ಇಂಧನ ಖರೀದಿಸಲು ಪೆಟ್ರೋಲ್‌ ಪಂಪ್‌ಗಳೆದುರು ವಾಹನಗಳ ಸರತಿ ಸಾಲು

Update: 2024-01-02 13:56 IST

Screengrab:X/@ANI

ಮುಂಬೈ: ಹಿಟ್‌ ಎಂಡ್‌ ರನ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನನ್ನು ವಿರೋಧಿಸಿ ಮಹಾರಾಷ್ಟ್ರದ ಹಲವೆಡೆ ಟ್ರಕ್‌ ಚಾಲಕರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇಂಧನ ಖರೀದಿಸಲು ದ್ವಿಚಕ್ರ ವಾಹನ ಸವಾರರು ಹಾಗೂ ಚತುಷ್ಚಕ್ರ ವಾಹನ ಚಾಲಕರು ಪೆಟ್ರೋಲ್‌ ಪಂಪುಗಳ ಹೊರಗೆ ಸಾಲುಗಟ್ಟಿದ್ದಾರೆ.

ನಾಗ್ಪುರ್‌, ಥಾಣೆ, ಜಲಗಾಂವ್‌ ಮತ್ತು ಧುಲಿಯಾದ ಪೆಟ್ರೋಲ್‌ ಪಂಪ್‌ಗಳ ಹೊರಗೆ ವಾಹನಗಳ ದೊಡ್ಡ ಸರತಿಯೇ ಕಂಡುಬಂದಿದೆ.

ಹಲವೆಡೆ ಪೊಲೀಸರು ಧಾವಿಸಿ ಪರಿಸ್ಥಿತಿ ನಿಭಾಯಿಸಬೇಕಾಯಿತು. ನಾಗ್ಪುರ್‌ ಜಿಲ್ಲೆಯ ಕೆಲ ಪೆಟ್ರೋಲ್‌ ಬಂಕ್‌ಗಳಲ್ಲು ಇಂಧನ ಕೊರತೆ ಎದುರಾಗಿದ್ದು ಪರಿಸ್ಥಿತಿ ಹೀಗೆಯೇ ಮುಂದುವರಿದರೆ “ಪೆಟ್ರೋಲ್‌ ಇಲ್ಲ” ಸೂಚನಾ ಫಲಕ ಅಳವಡಿಸಬೇಕಾದೀತೆಂದು ಕೆಲ ಬಂಕ್‌ ಮ್ಯಾನೇಜರ್‌ಗಳು ಹೇಳಿದ್ದಾರೆ. ನಾಸಿಕ್‌ನಲ್ಲಿ ಟ್ಯಾಂಕರ್‌ ಚಾಲಕರು ಕೆಲಸ ನಿಲ್ಲಿಸಿ 1000ಕ್ಕೂ ಅಧಿಕ ವಾಹನಗಳನ್ನು ಪಾನೆವಾಡಿ ಎಂಬಲ್ಲಿ ನಿಲ್ಲಿಸಿದ್ದಾರೆ.

ಥಾಣೆಯಲ್ಲಿ ಇಂಧನ ಕೊರತೆಯಿಂದ ಮೂರು ಬಂಕ್‌ಗಳು ಬಾಗಿಲು ಮುಚ್ಚಿವೆ.

ಮುಂಬೈಯಲ್ಲಿ ಕಳೆದ ರಾತ್ರಿ 150 ಪೆಟ್ರೋಲ್‌ ಪಂಪ್‌ಗಳಿಗೆ ಪೆಟ್ರೋಲ್‌ ಪೂರೈಸಲಾಗಿದೆ ಆದರೆ ಜನರು ಅಗತ್ಯಕ್ಕಿಂತ ಹೆಚ್ಚು ಪೆಟ್ರೋಲ್‌ ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಪೂರೈಕೆಯಾಗದಿದ್ದರೆ ಸಮಸ್ಯೆಯಾಗಬಹುದು ಎಂದು ಮುಂಬೈ ಪೆಟ್ರೋಲ್‌ ಪಂಪ್‌ ಅಸೋಸಿಯೇಶನ್‌ನ ಪ್ರಮುಖರೊಬ್ಬರು ಹೇಳಿದ್ದಾರೆ.

ಥಾಣೆಯಲ್ಲಿ ಚಾಲಕರು ಮುಂಬೈ-ಅಹ್ಮದಾಬಾದ್‌ ಹೆದ್ದಾರಿ ತಡೆ ನಡೆಸಿದ್ದಾರೆ ಹಾಗೂ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ನವಿ ಮುಂಬೈಯಲ್ಲೂ ಇದೇ ಪರಿಸ್ಥಿತಿಯಿತ್ತು. ಟ್ರಕ್‌ ಚಾಲಕರ ಒಂದು ಗುಂಪು ದಾಳಿಗೆ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ.

ಕೋಲುಗಳನ್ನು ಹಿಡಿದುಕೊಂಡ ಜನರ ಗುಂಪೊಂದು ಪೊಲೀಸ್‌ ಸಿಬ್ಬಂದಿಗೆ ಹಲ್ಲೆ ನಡೆಸಿ ಅವರನ್ನು ಓಡಿಸುತ್ತಿರುವ ವೀಡಿಯೋ ಕೂಡ ಹರಿದಾಡುತ್ತಿದೆ.

ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ ಬದಲಿಗೆ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತಾದ ಪ್ರಕಾರ ಹಿಟ್‌ ಎಂಡ್‌ ರನ್‌ ಪ್ರಕರಣಗಳಲ್ಲಿ ನಿರ್ಲಕ್ಷ್ಯದ ಚಾಲನೆಗೆ ಸವಾರರು 10 ವರ್ಷದ ತನಕ ಜೈಲು ಶಿಕ್ಷೆ ಅಥವಾ ರೂ 7 ಲಕ್ಷ ತನಕ ದಂಡ ಎದುರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News