×
Ad

ಕರ್ನಲ್ ಖುರೇಷಿ ವಿರುದ್ಧ ಸಚಿವ ವಿಜಯ್ ಶಾ ಹೇಳಿಕೆ | ತನಿಖೆಗೆ ಎಸ್‌ಐಟಿ ರಚನೆ

Update: 2025-05-20 10:58 IST

PC | PTI, X/@KrVijayShah

ಭೋಪಾಲ್ : ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಧ್ಯಪ್ರದೇಶ ಸರ್ಕಾರವು ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ರಾಜ್ಯ ಸಚಿವ ವಿಜಯ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆಗಳ ತನಿಖೆಗೆ ಮೂವರು ಸದಸ್ಯರಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್‌ಐಟಿ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರಮೋದ್ ವರ್ಮಾ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಕಲ್ಯಾಣ್ ಚಕ್ರವರ್ತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಾಹಿನಿ ಸಿಂಗ್ ಇದ್ದಾರೆ ಎಂದು ಅವರು ಹೇಳಿದರು.

ಕರ್ನಲ್ ಖುರೇಷಿ ಅವರ ಅವಹೇಳನಕಾರಿ ಹೇಳಿಕೆಗಳಿಗಾಗಿ ಸೋಮವಾರ ಸುಪ್ರೀಂ ಕೋರ್ಟ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿತು. ಸಚಿವರ ಕ್ಷಮೆ ಯಾಚನೆಯನ್ನು ಮೊಸಳೆ ಕಣ್ಣೀರು ಎಂದ ನ್ಯಾಯಾಲಯವು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ತನಿಖೆಗೆ ಮೂವರು ಸದಸ್ಯರ ವಿಶೇಷ ತನಿಖಾ ತಂಡ ರಚಿಸಲು ಆದೇಶ ನೀಡಿತ್ತು.

ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ದಾಖಲಾಗಿರುವ ಎಫ್‌ಐಆರ್ ತನಿಖೆಗೆ ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಐಜಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಮತ್ತು ಮಹಿಳಾ ಅಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಎಸ್‌ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್ ಆದೇಶದಂತೆ ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೈಲಾಶ್ ಮಕ್ವಾನಾ ಅವರು ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ.

ತನಿಖಾ ತಂಡವು ಮೇ 28 ರಂದು ತನ್ನ ಮೊದಲ ವರದಿಯನ್ನು ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆಪರೇಷನ್ ಸಿಂಧೂರ್ ಕುರಿತು ಹೇಳಿಕೆ ನೀಡುವಾಗ ವಿಜಯ್ ಶಾ ಅವರು ಕರ್ನಲ್ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News