×
Ad

ಮಧ್ಯಪ್ರದೇಶ: ಐ ಆರ್ ಸಿ ಟಿ ಸಿ ಮಳಿಗೆಯಲ್ಲಿ ಇಲಿಗಳು ಆಹಾರ ತಿನ್ನುತ್ತಿರುವ ವೀಡಿಯೊ ವೈರಲ್

Update: 2024-01-09 20:46 IST

PHOTO: NDTV

ಹೊಸದಿಲ್ಲಿ: ಐ ಆರ್ ಸಿ ಟಿ ಸಿ ಯ ಮಳಿಗೆಯೊಂದರಲ್ಲಿ ಇಲಿಗಳು ಆಹಾರವನ್ನು ತಿನ್ನುತ್ತಿರುವ ದೃಶ್ಯವನ್ನು ಸೆರೆಹಿಡಿದಿರುವ ವೀಡಿಯೊ ಆಹಾರ ನೈರ್ಮಲ್ಯ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಮಧ್ಯಪ್ರದೇಶದ ಇಟಾರ್ಸಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೋರ್ವರು ಈ ಆಘಾತಕಾರಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ‘ಟ್ರೇನ್ವಾಲೆ ಭೈಯ್ಯಾ’ ಎಂಬ ಯೂಸರ್ನೇಮ್ನಲ್ಲಿ ಸೌರಭ್ ಎನ್ನುವವರು ವೈರಲ್ ಆಗಿರುವ ಈ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

37 ಸೆಕೆಂಡ್‌ ಗಳ ವೀಡಿಯೊ ಇಲಿಗಳು ಖಾದ್ಯಗಳ ಪ್ಲೇಟ್ ಗಳು ಮತ್ತು ನೆಲದಲ್ಲಿಟ್ಟಿದ್ದ ಆಹಾರದ ಪಾತ್ರೆಗಳ ಮೇಲೆ ಹರಿದಾಡುತ್ತಿರುವುದನ್ನು ತೋರಿಸಿದೆ. ರೈಲು ನಿಲ್ದಾಣಗಳಲ್ಲಿಯ ಮಾರಾಟಗಾರರಿಂದ ಆಹಾರವನ್ನು ಸೇವಿಸುವ ಮುನ್ನ ಎಚ್ಚರಿಕೆ ವಹಿಸುವಂತೆ ಮತ್ತು ಅಲ್ಲಿಯ ನೈರ್ಮಲ್ಯವನ್ನು ಪರಿಶೀಲಿಸುವಂತೆ ಟ್ರೇನ್ವಾಲಾ ಭೈಯ್ಯಾ ಜನರನ್ನು ಆಗ್ರಹಿಸಿದ್ದಾರೆ.

‘ಇಲಿಗಳು ಐ ಆರ್ ಸಿ ಟಿ ಸಿ ಆಹಾರ ತಪಾಸಣೆಯ ಕರ್ತವ್ಯದಲ್ಲಿವೆ. ಇದೇ ಕಾರಣದಿಂದ ರೈಲು ನಿಲ್ದಾಣಗಳಲ್ಲಿಯ ಮಾರಾಟಗಾರರಿಂದ ಆಹಾರವನ್ನು ನಾನು ತಿನ್ನುವುದಿಲ್ಲ ’ ಎಂಬ ಅಡಿಬರಹವನ್ನು x ನಲ್ಲಿಯ ವೀಡಿಯೊಕ್ಕೆ ಅವರು ನೀಡಿದ್ದಾರೆ.

ವೈರಲ್ ವೀಡಿಯೊಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಕ್ಸ್ ಪೋಸ್ಟ್ ನಲ್ಲಿ ಭರವಸೆ ನೀಡಿದ್ದಾರೆ. ‘ತಕ್ಷಣ ಕ್ರಮ ಕೈಗೊಳ್ಳಲು ಡಿಎಂ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತ್ವರಿತ ಪರಿಹಾರಕ್ಕಾಗಿ ನೀವು ಸಂಬಂಧಿತ ವೆಬ್ಸೈಟ್ ಅಥವಾ ದೂರವಾಣಿ ಸಂಖ್ಯೆ 139ರ ಮೂಲಕವೂ ದೂರನ್ನು ಸಲ್ಲಿಸಬಹುದು ’ಎಂದು ರೇಲ್ವೆ ಸೇವಾ ಬಳಕೆದಾರರಿಗೆ ತಿಳಿಸಿದೆ. ಈ ವಿಷಯವನ್ನು ಭೋಪಾಲ ವಿಭಾಗದ ಸಂಬಂಧಿತ ಅಧಿಕಾರಿಯ ಗಮನಕ್ಕೆ ತರಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ ವಿಭಾಗೀಯ ರೈಲ್ವೆ ಮ್ಯಾನೇಜರ್ ಕೂಡ ವೀಡಿಯೊಕ್ಕೆ ಸ್ಪಂದಿಸಿದ್ದಾರೆ. ತಕ್ಷಣದ ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೀಡಿಯೊ ವೀಕ್ಷಿಸಿರುವ ನೆಟ್ಟಿಗರಲ್ಲಿ ಅಸಹ್ಯ ಮನೆಮಾಡಿದೆ. ರೈಲು ಪ್ರಯಾಣಿಕರಿಗೆ ಪೂರೈಸಲಾಗುವ ಆಹಾರದ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News