ತಮಿಳು ವಾರಪತ್ರಿಕೆ ʼಆನಂದ ವಿಕಟನ್ ವೆಬ್‌ಸೈಟ್ʼಗೆ ವಿಧಿಸಿರುವ ನಿರ್ಬಂಧ ಹಿಂಪಡೆಯುವಂತೆ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ
ಮದ್ರಾಸ್ ಹೈಕೋರ್ಟ್ | Photo ; PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ತಮಿಳು ವಾರಪತ್ರಿಕೆ ಆನಂದ ವಿಕಟನ್ ವೆಬ್‌ಸೈಟ್‌ಗೆ ವಿಧಿಸಿರುವ ನಿರ್ಬಂಧ ಹಿಂಪಡೆಯುವಂತೆ ಮದ್ರಾಸ್ ಹೈಕೋರ್ಟ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರು ವೆಬ್‌ಸೈಟ್ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಸರಕಾರಕ್ಕೆ ನಿರ್ದೇಶಿಸಿದ್ದು, ಕಾರ್ಟೂನ್ ಹೊಂದಿರುವ ಪುಟವನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ತಮಿಳು ವಾರಪತ್ರಿಕೆಗೆ ಸೂಚಿಸಿದರು.
ತಮಿಳು ವಾರಪತ್ರಿಕೆ 'ವಿಕಟನ್' ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಕೈಕೋಳ ಧರಿಸಿದ ಪ್ರಧಾನಿ ಮೋದಿಯವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರನ್ನು ಕೈಕೋಳ ಧರಿಸಿ ಅಮಾನವೀಯವಾಗಿ ಗಡಿಪಾರು ಮಾಡುವುದನ್ನು ವ್ಯಂಗ್ಯ ಚಿತ್ರವು ಟೀಕಿಸಿತ್ತು. ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಪಕ್ಷವು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರಿಗೆ ದೂರು ಸಲ್ಲಿಸಿತ್ತು. ಇದರ ಬೆನ್ನಲ್ಲೇ ತಮಿಳು ವಾರಪತ್ರಿಕೆ ವಿಕಟನ್ ವೆಬ್‌ಸೈಟ್‌ಗೆ ನಿರ್ಬಂಧಿಸಲಾಗಿತ್ತು.
ವಿಕಟನ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್ ನಾರಾಯಣ್, ಕಾರ್ಟೂನ್ ದೇಶದ ಸಾರ್ವಭೌಮತೆ, ಸಮಗ್ರತೆ ಅಥವಾ ಅಮೆರಿಕದೊಂದಿಗಿನ ದೇಶದ ಸೌಹಾರ್ಧ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಂವಿಧಾನದ ಪರಿಚ್ಛೇದ 19ರ ಅಡಿಯಲ್ಲಿ ಖಾತರಿಪಡಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮೊಟಕುಗೊಳಿಸಬಹುದು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಕಾರ್ಟೂನ್ ಮೊಟಕುಗೊಳಿಸಲು ಯಾವುದೇ ಆಧಾರಗಳಿಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಿದರು.
ಕಾರ್ಟೂನ್ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಅಂಶವನ್ನು ಹೊಂದಿಲ್ಲ. ವೆಬ್‌ಸೈಟ್ ಅನ್ನು ನಿರ್ಬಂಧಿಸುವ ಅಗತ್ಯವಿಲ್ಲ. ಆದರೆ, ಆಪಾದಿತ ಆಕ್ಷೇಪಾರ್ಹ ಕಾರ್ಟೂನ್ ಹೊಂದಿರುವ ಪುಟವನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ವೆಬ್‌ಸೈಟ್‌ಗೆ ನಿರ್ದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.