ತಿರುಪರಂಕುಂದ್ರಂ ದೀಪತೂನ್‌ನಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್
ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದೆಂಬ ರಾಜ್ಯ ಸರಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ
Photo credit: PTI
ಚೆನ್ನೈ: ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಮತ್ತು ಸಿಕ್ಕಂದರ್ ಬಾದುಷ ದರ್ಗಾ ಇರುವ ತಿರುಪರಂಕುಂದ್ರಂ ಬೆಟ್ಟದ ಮೇಲಿನ ಎರಡು ಶಿಖರಗಳ ಕೆಳಭಾಗದಲ್ಲಿರುವ ದೀಪಥೂನ್ ಎಂದು ಕರೆಯಲ್ಪಡುವ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲು ಅನುಮತಿ ನೀಡುವ ಏಕ ಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಜಿ ಜಯಚಂದ್ರನ್ ಮತ್ತು ನ್ಯಾಯಮೂರ್ತಿ ಕೆ ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು, ದೀಪ ಬೆಳಗುವುದನ್ನು ವಿರೋಧಿಸಿದ ಅರ್ಜಿದಾರರು ಆಗಮ ಶಾಸ್ತ್ರಗಳ ಅಡಿಯಲ್ಲಿ ಆ ಆಚರಣೆ ನಿಷಿದ್ಧವಾಗಿದೆ ಎಂಬುದನ್ನು ಸ್ಥಾಪಿಸಲು ನ್ಯಾಯಾಲಯದ ಮುಂದೆ ಯಾವುದೇ ಪ್ರಮುಖ ಅಥವಾ ದೃಢವಾದ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ.
Bar and Bench ವರದಿ ಪ್ರಕಾರ, ದೀಪ ಬೆಳಗುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗಬಹುದು ಎಂಬ ರಾಜ್ಯ ಸರಕಾರದ ವಾದವನ್ನು ಪೀಠವು ಬಲವಾಗಿ ತಿರಸ್ಕರಿಸಿದೆ. ದೇವಾಲಯದ ಆಡಳಿತವು ದೇವಾಲಯದ ಭೂಮಿಯಲ್ಲಿ ದೀಪ ಬೆಳಗುವುದರಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುತ್ತದೆ ಎಂಬುದು “ಹಾಸ್ಯಾಸ್ಪದ ಮತ್ತು ನಂಬಲಾಗದ ಸಂಗತಿ” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಶಾಂತಿಗೆ ಭಂಗ ತರಬಹುದೆಂಬ ರಾಜ್ಯದ ಆತಂಕವು ಕಾಲ್ಪನಿಕವಾಗಿದೆ. ಇದು ಸಮುದಾಯಗಳ ನಡುವೆ ಅಪನಂಬಿಕೆಯನ್ನು ಬೆಳೆಸಿದೆ ಎಂದು ನ್ಯಾಯಾಲಯ ಹೇಳಿದೆ.