×
Ad

ಮಹಾರಾಷ್ಟ್ರ | ನಿವೃತ್ತ ಬ್ಯಾಂಕ್ ಅಧಿಕಾರಿಯ ಡಿಜಿಟಲ್ ಅರೆಸ್ಟ್; ಇಬ್ಬರ ಬಂಧನ

Update: 2025-10-29 21:01 IST

   ಸಾಂದರ್ಭಿಕ ಚಿತ್ರ

ಮುಂಬೈ, ಅ. 29: ಹಿರಿಯ ಪೊಲೀಸ್ ಅಧಿಕಾರಿ, ತನಿಖಾಧಿಕಾರಿಯಂತೆ ಸೋಗು ಹಾಕಿ ಹಿರಿಯ ನಾಗರಿಕರನ್ನು ವಂಚಿಸಿದ ಆರೋಪದಲ್ಲಿ ಸೈಬರ್ ಅಪರಾಧ ತಂಡದ ಇಬ್ಬರು ಸದಸ್ಯರನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಹಿರಿಯ ನಾಗರಿಕರಲ್ಲಿ ಬಂಧನದ ಭೀತಿ ಹುಟ್ಟಿಸಿದ್ದಾರೆ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ.

2025 ಅಕ್ಟೋಬರ್ 9ರಂದು ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮುಂಬೈಯ ಉತ್ತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಬ್ಯಾಂಕ್ ನ ನಿವೃತ್ತ ಉದ್ಯೋಗಿ. ಸೆಪ್ಟಂಬರ್ 11 ಹಾಗೂ 24ರ ನಡುವೆ ವ್ಯಾಟ್ಸ್ ಆ್ಯಪ್ ಹಾಗೂ ವೀಡಿಯೊ ಕರೆ ಮೂಲಕ ವಂಚಕರು ಅವರನ್ನು ಸಂಪರ್ಕಿಸಿದರು. ತಮ್ಮನ್ನು ನಾಸಿಕ್ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡರು ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದರು ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಯ ಮನವರಿಕೆ ಮಾಡಲು ವಂಚಕರು ಸರಕಾರಿ ಮೊಹರು, ಎಫ್ಐಆರ್ ಪ್ರತಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಐಪಿಎಸ್ ಅಧಿಕಾರಿಯ ಗುರುತು ಚೀಟಿ ಸೇರಿದಂತೆ ನಕಲಿ ದಾಖಲೆಗಳನ್ನು ಕಳುಹಿಸಿದರು.

ವಂಚಕರು ಅವರ ವಿವರಗಳನ್ನು ಪರಿಶೀಲಿಸುವಂತೆ ನಟಿಸಿ ನಕಲಿ ಡಿಜಿಟಲ್ ಅರೆಸ್ಟ್ ತಂತ್ರವನ್ನು ಬಳಸಿದರು. ಅವರು ದೂರುದಾರರು ಮತ್ತು ಅವರ ಪತ್ನಿಯನ್ನು ಮೂರು ದಿನಗಳ ಕಾಲ ವೀಡಿಯೊ ಕರೆಯಲ್ಲಿ ಇರುವಂತೆ ಒತ್ತಾಯಿಸಿದರು. ಅಲ್ಲದೆ 50,50,900 ರೂ. ಬ್ಯಾಂಕ್ ನ ಅಪರಿಚಿತ ಖಾತೆಗೆ ವರ್ಗಾಯಿಸುವಂತೆ ಒತ್ತಾಯಿಸಿದರು.

ತನಿಖೆಯ ಸಂದರ್ಭ ಪೊಲೀಸರು ಪ್ರಥಮ ಹಂತದ ಫಲಾನುಭವಿ ಖಾತೆಗೆ 29,50,900 ರೂ. ಠೇವಣಿಯಾಗಿರುವುದನ್ನು ಪತ್ತೆ ಮಾಡಿದರು. ತನಿಖಾಧಿಕಾರಿಗಳು ಅಂತಹ ಒಂದು ಖಾತೆ ಹೊಂದಿದ ವ್ಯಕ್ತಿಯನ್ನು ಥಾಣೆ ಜಿಲ್ಲೆಯ ಉಲ್ಲಾಸ್ ನಗರದಿಂದ ಪತ್ತೆ ಮಾಡಿದರು ಹಾಗೂ ಆತನನ್ನು ಅಕ್ಟೋಬರ್ 25ರಂದು ಬಂಧಿಸಿದರು. ಆತ ತನ್ನ ವೈಯುಕ್ತಿಕ ಮಾಹಿತಿಗಳನ್ನು ಬಳಸಿ ಖಾತೆ ತೆರೆದಿದ್ದ. ಅನಂತರ ಅದನ್ನು ಕಮಿಷನ್ಗಾಗಿ ಸಹಚರನಿಗೆ ನೀಡಿದ್ದ. ಮತ್ತಷ್ಟು ತನಿಖೆ ಆತನ ಸಹವರ್ತಿಯ ಬಂಧನಕ್ಕೆ ಕಾರಣವಾಯಿತು.

ಬಂಧಿತ ಆರೋಪಿಗಳನ್ನು ರವಿ ಆನಂದ ಅಂಬೊರೆ (35) ಹಾಗೂ ವಿಶ್ವಪಾಲ್ ಚಂದ್ರಕಾಂತ್ ಜಾಧವ್ (37) ಎಂದು ಗುರುತಿಸಲಾಗಿದೆ. ಪೊಲೀಸರು ಅವರಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News