ಮಹಾರಾಷ್ಟ್ರ: ಶಿಕ್ಷಕಿ ಮನೆಯಲ್ಲಿ ಬೆಂಕಿ ಆಕಸ್ಮಿಕ; 175 ಉತ್ತರ ಪತ್ರಿಕೆ ಭಸ್ಮ
PC: x.com/News18lokmat
ಪಾಲ್ಘರ್: ಶಿಕ್ಷಕಿಯೊಬ್ಬರ ಮನೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಎಚ್ಎಸ್ ಸಿ ಮಂಡಳಿಯ 175 ಉತ್ತರ ಪತ್ರಿಕೆಗಳು ಭಸ್ಮವಾಗಿರುವ ಘಟನೆ ಮಹಾರಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯ್ ನಲ್ಲಿ ಮಾ.10ರಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಶಿಕ್ಷಕಿ ಈ ಉತ್ತರ ಪತ್ರಿಕೆಗಳನ್ನು ಮನೆಗೆ ತಂದಿದ್ದು, ಬೆಂಕಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ನೆರೆಹೊರೆಯವರು ಆಗಮಿಸಿ ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ಬೆಂಕಿ ಆರಿಸಿದ್ದಾರೆ. ಆದರೆ ಆ ವೇಳೆಗಾಗಲೇ ಉತ್ತರ ಪತ್ರಿಕೆಗಳು ಸುಟ್ಟುಹೋಗಿದ್ದವು ಎಂದು ಹೇಳಲಾಗಿದೆ. ಉತ್ತರ ಪತ್ರಿಕೆಗಳನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದಲ್ಲಿ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕೆಲ ಉತ್ತರ ಪತ್ರಿಕೆಗಳಿಗೆ ಯಾವುದೇ ಹಾನಿಯಾಗಿಲ್ಲ. ಆರ್ಗನೈಸೇಷನ್ ಅಂಡ್ ಮ್ಯಾನೇಜ್ಮೆಂಟ್ ವಿಷಯದ ಮೇಲೆ ಫೆಬ್ರವರಿ 15ರಂದು ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳು ಭಸ್ಮವಾಗಿವೆ. ಸೋಫಾದ ಮೇಲೆ ಇರಿಸಿದ್ದ ಉತ್ತರ ಪತ್ರಿಕೆಗಳ ಕಟ್ಟು ಭಸ್ಮವಾಗಿವೆ. ವಿಹಾರ್ ನ ಉತ್ಕರ್ಷ್ ವಿದ್ಯಾಲಯ ಮತ್ತು ಜ್ಯೂನಿಯರ್ ಕಾಲೇಜಿನ ಉತ್ತರ ಪತ್ರಿಕೆಗಳನ್ನು ಶಿಕ್ಷಕಿ ಮನೆಗೆ ತಂದಿದ್ದು, ಇವು ಸುಟ್ಟುಹೋಗಿವೆ. ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್, ಶಿಕ್ಷಕಿ ಪ್ರಿಯಾ ರಾಡ್ರಿಗಸ್ ಮತ್ತು ಪ್ರಾಚಾರ್ಯ ಮುಗ್ಧ ಲೇಲೆ ವಿರುದ್ಧ ಎಫ್ಐಆರ್ ದಾಖಲಿಸಿದೆ.
"ನಂಬತ್ ರಸ್ತೆಯ ಮನೆಯನ್ನು ತಲುಪಿದಾಗ, ಮನೆಗೆ ಬೆಂಕಿ ಬಿದ್ದಿರುವುದು ಮತ್ತು ಅಕ್ಕಪಕ್ಕದವರು ಅದನ್ನು ನಿಯಂತ್ರಣಕ್ಕೆ ತಂದಿರುವುದು ಕಂಡುಬಂತು" ಎಂದು ವಸಾಯ್-ವಿಹಾರ್ ಮಹಾನಗರ ಪಾಲಿಕೆಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೋಫಾದಲ್ಲಿ ಇಟ್ಟಿದ್ದ ಉತ್ತರ ಪತ್ರಿಕೆಗಳು ಸುಟ್ಟುಹೋಗಿರುವುದನ್ನು ಅವರು ದೃಢಪಡಿಸಿದ್ದಾರೆ. ದಟ್ಟವಾಗಿ ಮುಸುಕಿದ್ದ ಹೊಗೆಯನ್ನು ಆ ಬಳಿಕ ನಿಯಂತ್ರಿಸಲಾಯಿತು ಎಂದು ವಿವರಿಸಿದ್ದಾರೆ.
ಬೊಲಿಂಜ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ಕೈಗೊಂಡರು. ಪರೀಕ್ಷಕರು ಈ ಉತ್ತರ ಪತ್ರಿಕೆಗಳನ್ನು ನೋಡಿದ್ದು, ಅಂಕಗಳ ಟಿಪ್ಪಣಿಯನ್ನೂ ನೀಡಿದ್ದರು. ಮೋಡರೇಟರ್ ಆಗಿದ್ದ ರೋಡ್ರಿಗಸ್ ಅವುಗಳ ಮರು ಪರಿಶೀಲನೆ ಮಾಡಬೇಕಿತ್ತು. ಆದರೆ ಮನೆಯಲ್ಲಿ ಇವು ಬೆಂಕಿಗೆ ಆಹುತಿಯಾದವು. ಸಾರ್ವಜನಿಕ ಸೇವಕರ ಅವಿಧೇಯತೆ ಮತ್ತು ಸಾರ್ವಜನಿಕ ಆಸ್ತಿಯ ನಷ್ಟದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಕಾಶ್ ಸಾವಂತ್ ಹೇಳಿದ್ದಾರೆ.