ಮಹಾರಾಷ್ಟ್ರ | ವಿರಾರ್‌ನಲ್ಲಿ ಕಟ್ಟಡ ಕುಸಿತ : ಮೃತರ ಸಂಖ್ಯೆ 15ಕ್ಕೆ ಏರಿಕೆ
Photo | PTI
ಮುಂಬೈ : ಮಹಾರಾಷ್ಟ್ರದ ವಿರಾರ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಹಿಂಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಹಲವರು ಇನ್ನು ಕೂಡ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಆರೋಹಿ ಓಂಕಾರ್ ಜೋವಿಲ್ (24), ಉತ್ಕರ್ಷ (1), ಲಕ್ಷ್ಮಣ್ ಕಿಸ್ಕು ಸಿಂಗ್ (26), ದಿನೇಶ್ ಪ್ರಕಾಶ್ ಸಪ್ಕಲ್ (43), ಸುಪ್ರಿಯಾ ನಿವಾಲ್ಕರ್ (38), ಅರ್ನವ್ ನಿವಾಲ್ಕರ್ (11) ಮತ್ತು ಪಾರ್ವತಿ ಸಪ್ಕಲ್ ಎಂದು ಗುರುತಿಸಲಾಗಿದೆ. ಇನ್ನುಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯರ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇನ್ನು ಕೂಡ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ರಾಣಿ ಜಾಖರ್ ದೃಢಪಡಿಸಿದ್ದಾರೆ.
ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್ (ವಿವಿಎಂಸಿ) ಈ ಕಟ್ಟಡವನ್ನು 'ಅಕ್ರಮ' ಎಂದು ಈ ಹಿಂದೆ ಘೋಷಿಸಿತ್ತು. ಬುಧವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ.