ಮಹಾರಾಷ್ಟ್ರದಂತೆಯೇ ಬಿಹಾರದಲ್ಲಿ ಚುನಾವಣಾ ಅಕ್ರಮ ನಡೆಸಲು ಬಿಡುವುದಿಲ್ಲ: ರಾಹುಲ್ ಗಾಂಧಿ ಎಚ್ಚರಿಕೆ
ರಾಹುಲ್ ಗಾಂಧಿ | PTI
ಪಾಟ್ನಾ: 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಯಿತು. ಈ ಮಾದರಿಯಲ್ಲಿಯೇ ಬಿಹಾರದಲ್ಲಿ ಅಕ್ರಮ ಎಸಗಲು ಎನ್‌ಡಿಎ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಹಾರದಲ್ಲಿ ಈ ರೀತಿಯ ಅಕ್ರಮ ನಡೆಯಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನವನ್ನು ವಿರೋಧಿಸಿ, ಇಂಡಿಯಾ ಮೈತ್ರಿಕೂಟದ ಭಾಗವಾದ ಮಹಾಘಟಬಂಧನ್ ಬಿಹಾರದಲ್ಲಿ ಕರೆ ನೀಡಿದ್ದ ರಾಜ್ಯ ಬಂದ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಪಾಟ್ನಾದಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಸಾಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡಿದ ಅವರು, "ಮಹಾರಾಷ್ಟ್ರದ ಚುನಾವಣೆ ಬಿಜೆಪಿಗೆ ಅನುಕೂಲವಾಗುವಂತೆ ಅಕ್ರಮವಾಗಿ ನಡೆಸಲ್ಪಟ್ಟಿತು. ಬಿಹಾರದಲ್ಲಿಯೂ ಅಂತಹದ್ದೇ ಅಕ್ರಮ ಪುನರಾವರ್ತಿಸಲು ಯತ್ನ ನಡೆಯುತ್ತಿದೆ. ಆದರೆ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ," ಎಂದರು.
"ಸಂವಿಧಾನವನ್ನು ಎತ್ತಿ ಹಿಡಿಯುವಂತೆ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ಬಿಜೆಪಿಯ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದೆ. ಆಯುಕ್ತರನ್ನು ಬಿಜೆಪಿ ನಾಮನಿರ್ದೇಶನ ಮಾಡಿದೆ. ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಎಂಬುದು ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರಬಲ್ಲ ಮೊಟ್ಟ ಮೊದಲ ಹಂತ. ವಿಶೇಷವಾಗಿ ಯುವ ಮತದಾರರ ಹಕ್ಕುಗಳನ್ನು ಕಸಿಯಲು ಈ ಕ್ರಮ ಕೈಗೊಳ್ಳಲಾಗಿದೆ ," ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರು ಆಗಿರುವ ರಾಹುಲ್ ಗಾಂಧಿಯವರು ಪ್ರತಿಭಟನೆಯಲ್ಲಿ ಭಾಗವಹಿಸಲು ಬುಧವಾರ ಬೆಳಗ್ಗೆ ಪಾಟ್ನಾಗೆ ಆಗಮಿಸಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಸೇರಿದಂತೆ ಹಲವು ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪಾಟ್ನಾದ ಆದಾಯ ತೆರಿಗೆ ಗೋಲಾಂಬರ್ ನಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ರಾಹುಲ್ ಗಾಂಧಿ ಮತ್ತು ಇತರ ನಾಯಕರು ಮೆರವಣಿಗೆಯಲ್ಲಿನ ವಾಹನದ ಮೇಲೆ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಮಹಾಘಟಬಂಧನ್ ಕರೆ ನೀಡಿದ ಬಂದ್‌ಗೆ ರಾಜ್ಯದ ಹಲವೆಡೆ ಬೃಹತ್ ಪ್ರತಿಕ್ರಿಯೆ ವ್ಯಕ್ತವಾಯಿತು. ವಿರೋಧ ಪಕ್ಷಗಳ ಕಾರ್ಯಕರ್ತರು ರಸ್ತೆಗಳ ಮೇಲೆ ಧರಣಿ ನಡೆಸಿ, ಟೈರ್‌ಗಳನ್ನು ಸುಟ್ಟು ಸಂಚಾರವನ್ನು ತಡೆದರು. ಪಾಟ್ನಾದ ಮಹಾತ್ಮ ಗಾಂಧಿ ಸೇತುವೆ ಸೇರಿದಂತೆ ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿತು. ಕೆಲವು ರೈಲುಗಳ ಮೇಲೆ ತಾತ್ಕಾಲಿಕ ವಿಳಂಬದ ಪರಿಣಾಮವೂ ಕಂಡುಬಂದಿತು.