×
Ad

ಕಳೆದ 10 ವರ್ಷಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶಕ್ಕೆ ಸಂಘಟಿತ ಪ್ರಯತ್ನ ನಡೆದಿದೆ: ಖರ್ಗೆ

Update: 2024-09-15 20:45 IST

 ಮಲ್ಲಿಕಾರ್ಜುನ ಖರ್ಗೆ | PTI

ಹೊಸದಿಲ್ಲಿ : ಕಳೆದ 10 ವರ್ಷಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶಕ್ಕೆ ಸಂಘಟಿತ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ಹೇಳಿದ್ದಾರೆ.

ಭಾರತದ ಪ್ರಜಾಪ್ರಭುತ್ವಕ್ಕೆ 2024 ಉತ್ತಮ ವರ್ಷವಾಗಿದೆ ಎಂದು ಪ್ರತಿಪಾದಿಸಿದ ಅವರು, ನಮ್ಮ ದೇಶದ ನಿರ್ಮಾತೃಗಳು ಶ್ರಮದಿಂದ ನಿರ್ಮಿಸಿದ ನಮ್ಮ ದೀರ್ಘಕಾಲದ ಸಂಸ್ಥೆಗಳಲ್ಲಿ ಇಟ್ಟಿರುವ ನಂಬಿಕೆಯ ಮೇಲೆ 140 ಕೋಟಿ ಭಾರತೀಯರು ತೀರ್ಪು ನೀಡಿದ್ದಾರೆ ಎಂದು ಲೋಕಸಭಾ ಚುನಾವಣೆ ಫಲಿತಾಂಶ ಉಲ್ಲೇಖಿಸಿ ಅವರು ಹೇಳಿದರು.

ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವದ ರಚನೆಗಳನ್ನು ನಾಶಮಾಡಲು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉರುಳಿಸಲು ಹಾಗೂ ನಮ್ಮ ವ್ಯವಸ್ಥೆಗಳ ಸಮಗ್ರತೆಗೆ ಧಕ್ಕೆ ತರಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

‘‘ಪ್ರಜಾಪ್ರಭುತ್ವ ಸರಕಾರದ ಅತ್ಯುತ್ತಮ ಮಾದರಿ. ಅವರು ನಮ್ಮನ್ನು ಹೇಗೆ ಆಳಿದರು ಎಂಬುದನ್ನು ಹೇಳಲು ಹಾಗೂ ನಮ್ಮ ನಾಯಕರನ್ನು ಉತ್ತರದಾಯಿಯನ್ನಾಗಿಸಲು ಇದು ಜನರಿಗೆ ಅವಕಾಶ ನೀಡುತ್ತದೆ’’ ಎಂಬ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ಖರ್ಗೆ ಉಲ್ಲೇಖಿಸಿದರು.

ಈಗ ನಮ್ಮ ಸಂಸದೀಯ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ಇನ್ನಷ್ಟು ಜಾಗರೂಕರಾಗಿಬೇಕು. ಭಾರತದ ಪ್ರಜೆಗಳೆಲ್ಲರೂ ನಂಬಿರುವ ನೀತಿಯನ್ನು ರಕ್ಷಿಸಬೇಕು ಎಂದು ಅವರು ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ರವಿವಾರ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಇಂದು ಮತ್ತೊಮ್ಮೆ ನಮ್ಮನ್ನು ನಾವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವದ ತತ್ವಗಳನ್ನು ಒಳಗೊಂಡಿರುವ ಭಾರತದ ಮೂಲತತ್ವಕ್ಕೆ ಸಮರ್ಪಿಸಿಕೊಳ್ಳೋಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News