×
Ad

ನಾವಾಗಿದ್ದರೆ ಮರಣ ದಂಡನೆ ಖಾತರಿಪಡಿಸುತ್ತಿದ್ದೆವು | ತನಿಖೆಯನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ: ಮಮತಾ ಬ್ಯಾನರ್ಜಿ

Update: 2025-01-20 20:21 IST

ಮಮತಾ ಬ್ಯಾನರ್ಜಿ | PC : PTI  

ಕೋಲ್ಕತಾ : ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿಗೆ ಕೋಲ್ಕತಾದ ನ್ಯಾಯಾಲಯವೊಂದು ನೀಡಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘‘ನನಗೆ ತೃಪ್ತಿಯಾಗಿಲ್ಲ. ನಾವೆಲ್ಲರೂ ಮರಣ ದಂಡನೆಗೆ ಒತ್ತಾಯಿಸಿದ್ದೆವು. ಆದರೆ, ನ್ಯಾಯಾಲಯವು ಜೀವಿತಾವಧಿ ಶಿಕ್ಷೆ ವಿಧಿಸಿದೆ’’ ಎಂಬುದಾಗಿ ಅವರು ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದರು.

ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರಿಂದ ‘‘ಬಲವಂತ’’ವಾಗಿ ಕಸಿದುಕೊಳ್ಳಲಾಯಿತು ಎಂದು ಮಮತಾ ಹೇಳಿದರು. ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರೇ ಮುಂದುವರಿಸಿದ್ದರೆ ಆರೋಪಿಗೆ ಮರಣದಂಡನೆಯಾಗುವಂತೆ ಖಾತರಿಪಡಿಸುತ್ತಿದ್ದರು ಎಂದು ಅವರು ಹೇಳಿಕೊಂಡರು.

ಮುರ್ಶಿದಾಬಾದ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಸಿಬಿಐ ನಡೆಸಿದ ತನಿಖೆಯನ್ನು ಪ್ರಶ್ನಿಸಿದರು.

‘‘ನಾವೆಲ್ಲರೂ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿದ್ದೆವು. ಆದರೆ, ನ್ಯಾಯಾಲಯವು ಸಾಯುವವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ತನಿಖೆಯನ್ನು ನಮ್ಮಿಂದ ಬಲವಂತವಾಗಿ ಕಸಿದುಕೊಳ್ಳಲಾಗಿತ್ತು. ಪ್ರಕರಣವು ನಮ್ಮಲ್ಲೇ ಇದ್ದರೆ ಆರೋಪಿಗೆ ಮರಣ ದಂಡನೆಯಾಗುವಂತೆ ನಾವು ನೋಡಿಕೊಳ್ಳುತ್ತಿದ್ದೆವು’’ ಎಂದು ಅವರು ನುಡಿದರು.

‘‘ತನಿಖೆ ಹೇಗೆ ನಡೆಸಲಾಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಿರುವ ಇಂಥದೇ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣ ದಂಡನೆಯಾಗಿದೆ. ನನಗೆ ತೃಪ್ತಿಯಾಗಿಲ್ಲ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News