ಕೇರಳ | ನಾಯಿ ವಿಚಾರದಲ್ಲಿ ಜಗಳ ಕೊಲೆಯಲ್ಲಿ ಅಂತ್ಯ
Update: 2025-04-20 19:27 IST
ಸಾಂದರ್ಭಿಕ ಚಿತ್ರ | PTI
ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ವೆಲ್ಲಿಕುಲಂಗರ ಬಳಿ ಸಾಕು ನಾಯಿ ಮನೆಯ ಅಂಗಳಕ್ಕೆ ಪ್ರವೇಶಿಸಿದ್ದಕ್ಕೆ ನಾಯಿಯ ಮಾಲಕನನ್ನು ನೆರೆಮನೆಯ ವ್ಯಕ್ತಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶಿಜೋ ಕೊಲೆಯಾದವರು. ನೆರೆಮನೆಯ ಜೋಸೆಫ್ ಕೃತ್ಯ ಎಸಗಿದ ಆರೋಪಿ. ಶಿಜೋ ಅವರ ಸಾಕು ನಾಯಿ ಜೋಸೆಫ್ ಅವರ ಮನೆಯ ಅಂಗಳಕ್ಕೆ ಹೋಗುತ್ತಿತ್ತು. ಇದೇ ವಿಚಾರಕ್ಕೆ ನೆರೆಮನೆಯವರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಶನಿವಾರ ರಾತ್ರಿ ಮತ್ತೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಜೋಸೆಫ್ ಶಿಜೋ ಅವರನ್ನು ಇರಿದು ಕೊಲೆ ಮಾಡಿದ್ದಾನೆ. ಘಟನೆ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.
ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.