×
Ad

ಮಧ್ಯಪ್ರದೇಶ | ನಕ್ಸಲೀಯನೆಂದು ಆದಿವಾಸಿಯನ್ನು ಹತ್ಯೆಗೈದ ಪೊಲೀಸರು: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2025-03-16 13:51 IST

ಸಾಂದರ್ಭಿಕ ಚಿತ್ರ 

ಮಾಂಡ್ಲಾ: ಇತ್ತೀಚೆಗೆ ಮಧ್ಯಹಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಹತನಾಗಿರುವ ವ್ಯಕ್ತಿ ಆದಿವಾಸಿಯೇ ಹೊರತು ಮಾವೋವಾದಿಯಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ಬೆನ್ನಿಗೇ, ಮೃತ ವ್ಯಕ್ತಿ ಅಮಾಯಕನಾಗಿದ್ದು, ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಹಾಗೂ ನ್ಯಾಯಾಂಗ ತನಿಖೆ ನಡೆಬೇಕು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದೆ.

ಮೃತ ವ್ಯಕ್ತಿಯನ್ನು ಹೀರನ್ ಸಿಂಗ್ ಪಾರ್ಥ (38) ಎಂದು ಗುರುತಿಸಲಾಗಿದ್ದು, ಆತ್ಯಂತ ದುರ್ಬಲ ಆದಿವಾಸಿ ಗುಂಪಾದ ಬೈಗಾ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್ 9ರಂದು ನಡೆದಿದ್ದ ಈ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದ ಪಾರ್ಥರ ಗುರುತನ್ನು ಮಾರ್ಚ್ 13ರಂದು ಪತ್ತೆ ಹಚ್ಚಲಾಗಿತ್ತು ಎಂದು ಶನಿವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಕುರಿತು ಇನ್ನಷ್ಟು ವಿವರಗಳನ್ನು ಪ್ರಶ್ನಿಸಿದಾಗ, ಮಾಂಡ್ಲಾ ಜಿಲ್ಲೆಯ ಖತಿಯಾ ಪ್ರದೇಶದಲ್ಲಿರುವ ಕಾಡಿನೊಳಗೆ ಪಾರ್ಥ ನಕ್ಸಲೀಯರೊಂದಿಗಿದ್ದ ಎಂದು ಬಾಲಘಾಟ್ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂಜಯ್ ಕುಮಾರ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ನಕ್ಸಲೀಯರು ಪದೇ ಪದೇ ಆದಿವಾಸಿಗಳೊಂದಿಗೆ ಸಂಚರಿಸುತ್ತಿರುತ್ತಾರೆ. ತನಿಖೆ ಪೂರ್ಣಗೊಂಡ ನಂತರವಷ್ಟೆ, ಆತ ನಕ್ಸಲೀಯರೊಂದಿಗೆ ಹೊಂದಿದ್ದ ಸಂಬಂಧದ ಕುರಿತು ತಿಳಿಸಲು ಸಾಧ್ಯ” ಎಂದು ಅವರು ಹೇಳಿದ್ದಾರೆ.

“ಆತ ಮಾವೋವಾದಿ ಎಂಬುದಕ್ಕೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಸದ್ಯ, ಆತ ಲಸಾರ ತೋಲಾ ಗ್ರಾಮದ ನಿವಾಸಿ ಎಂಬುದಷ್ಟೆ ತಿಳಿದು ಬಂದಿದೆ” ಎಂದೂ ಅವರು ತಿಳಿಸಿದ್ದಾರೆ.

ಎನ್ ಕೌಂಟರ್ ನಂತರ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ, ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಾಂಡ್ಲಾ ಜಿಲ್ಲೆಯ ಆದಿವಾಸಿ ಪ್ರಾಬಲ್ಯವಿರುವ ಬಿಚ್ಚಿಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕ ನಾರಾಯಣ್ ಸಿಂಗ್ ಪಟ್ಟಾ, “ನಾನು ಶನಿವಾರ ಪಾರ್ಥರ ಗ್ರಾಮದಲ್ಲಿ ಅವರ ಮಕ್ಕಳು ಹಾಗೂ ಇನ್ನಿತರ ನಿವಾಸಿಗಳನ್ನು ಭೇಟಿಯಾಗಿದ್ದೆ. ನಾನು ಅಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೂ ಇದ್ದರೂ, ನಾನು ಪಾರ್ಥರ ಪತ್ನಿಯನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯಿದ್ದಾರೆ ಎಂದು ನನಗೆ ಅಲ್ಲಿನ ನಿವಾಸಿಗಳು ತಿಳಿಸಿದರು” ಎಂದು ಆರೋಪಿಸಿದ್ದಾರೆ.

ಮೃತ ವ್ಯಕ್ತಿಯು ಐವರು ಮಕ್ಕಳ ತಂದೆಯಾಗಿದ್ದು, ಆತ ಅಮಾಯಕನಾಗಿದ್ದಾನೆ. ಆತ ನರೇಗಾ ಯೋಜನೆಯಡಿ ಕೆಲಸವನ್ನೂ ಮಾಡಿದ್ದ ಎಂದು ಅವರು ತಿಳಿಸಿದ್ದಾರೆ.

“ಪಾರ್ಥರಿಗೆ ಮಾವೋವಾದಿಗಳು ಯಾರೆಂಬುದೇ ತಿಳಿದಿರಲಿಕ್ಕಿಲ್ಲ. ಆತ ಕಾಡಿನೊಳಕ್ಕೆ ಹೋಗಿ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುತ್ತಿದ್ದ ಹಾಗೂ ಪಾರಿವಾಳಗಳನ್ನು ಹಿಡಿಯುತ್ತಿದ್ದ ಎಂಬುದು ನನಗೆ ತಿಳಿದು ಬಂದಿದೆ ಎಂದು ಹೇಳಿದ ಅವರು, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಹಾಗೂ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ, ಮಾರ್ಚ್ 9ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದ ಪೊಲೀಸರು, ಎನ್ ಕೌಂಟರ್ ವೇಳೆ ಓರ್ವ ನಕ್ಸಲೀಯ ಮೃತಪಟ್ಟಿದ್ದು, ಆತನ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News