ಸಂವಿಧಾನ ಅನುಮತಿಸಿದೆ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸುಪ್ರೀಂ ಕೋರ್ಟ್
Photo credit: PTI
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಚುನಾವಣಾ ಆಯೋಗ ಕೈಗೊಂಡ ಕ್ರಮದಲ್ಲಿ ತರ್ಕ ಮತ್ತು ಪ್ರಾಯೋಗಿಕತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಸಂಸ್ಥೆಗೆ ಸಂವಿಧಾನದ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲು ಅನುಮತಿಯಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಎರಡೂ ಕಡೆಯ ವಾದಗಳನ್ನು ಆಲಿಸಿತು. ಅಂತಹ ಪರಿಷ್ಕರಣೆಗೆ ಭಾರತೀಯ ಸಂವಿಧಾನದ ಅಡಿಯಲ್ಲಿ ಅನುಮತಿಸಲಾಗಿದೆ. ಬಿಹಾರದಲ್ಲಿ ಕೊನೆಯ ಬಾರಿಗೆ ಇದೇ ರೀತಿಯ ಪ್ರಕ್ರಿಯೆ 2003ರಲ್ಲಿ ನಡೆದಿದೆ ಎಂದು ಪೀಠವು ಗಮನಿಸಿದೆ.
SIR ಸರಿಸುಮಾರು 7.9 ಕೋಟಿ ನಾಗರಿಕರನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಪ್ರಕ್ರಿಯೆಯು ಆಧಾರ್ ಅಥವಾ ಮತದಾರರ ಗುರುತಿನ ಚೀಟಿಗಳನ್ನು ಮಾತ್ರ ಅವಲಂಬಿಸಿಲ್ಲ ಎಂದು ಸ್ಪಷ್ಟಪಡಿಸಿದೆ,
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ NGO ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಆರ್‌ಜೆಡಿ ಸಂಸದ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಸಿಪಿಐನ ಡಿ. ರಾಜಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನೆಯ ಅರವಿಂದ್ ಸಾವಂತ್, ಜೆಎಂಎಂನ ಸರ್ಫ್ರಾಝ್ ಅಹ್ಮದ್ ಮತ್ತು ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.