×
Ad

ಮರಾಠಾ ಕೋಟಾ | ಐದನೇ ದಿನವೂ ಮುಂದುವರಿದ ಮನೋಜ ಜಾರಂಗೆ ಉಪವಾಸ, ಹದಗೆಟ್ಟ ಆರೋಗ್ಯ

Update: 2024-02-14 23:06 IST

ಮನೋಜ ಜಾರಂಗೆ | Photo: PTI 

ಜಾಲ್ನಾ(ಮಹಾರಾಷ್ಟ್ರ): ಮರಾಠಾ ಮೀಸಲಾತಿ ಆಂದೋಲನದ ನೇತಾರ ಮನೋಜ ಜಾರಂಗೆ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಐದನೇ ದಿನವಾದ ಬುಧವಾರವೂ ಮುಂದುವರಿದಿದ್ದು, ಅವರ ಆರೋಗ್ಯವು ಹದಗೆಡುತ್ತಿದೆ. ಅವರ ಮೂಗಿನಿಂದ ರಕ್ತ ಸೋರುತ್ತಿದೆ,ಆದರೆ ತನ್ನನ್ನು ಪರೀಕ್ಷಿಸಲು ಅವರು ವೈದ್ಯರಿಗೆ ಅವಕಾಶ ನೀಡುತ್ತಿಲ್ಲ. ಅವರು ನೀರನ್ನು ಸೇವಿಸುತ್ತಿಲ್ಲ, ಔಷಧಿಗಳನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಅವರ ಆಪ್ತ ಕಾರ್ಯಕರ್ತರೋರ್ವರು ತಿಳಿಸಿದರು.

ಮರಾಠಾ ಸಮುದಾಯವನ್ನು ಒಬಿಸಿ ಗುಂಪಿಗೆ ಸೇರಿಸಬೇಕೆಂದು ಆಗ್ರಹಿಸಿ ಜಾರಂಗೆ ತನ್ನ ಸ್ವಗ್ರಾಮ, ಜಾಲ್ನಾ ಜಿಲ್ಲೆಯ ಅಂತರವಾಲಿ ಸರಾಟಿಯಲ್ಲಿ ಅನಿರ್ಧಿಷ್ಟಾವಧಿ ಉಪವಾಸವನ್ನು ನಡೆಸುತ್ತಿದ್ದಾರೆ.

ಪ್ರತಿಭಟನಾ ಸ್ಥಳದಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ಉಪವಾಸ ಸತ್ಯಾಗ್ರಹದ ವೇಳೆ ತಾನು ಸತ್ತರೆ ಮರಾಠಾ ಸಮುದಾಯದ ಜನರು ರಾಮಾಯಣದಲ್ಲಿ ಹನುಮಂತ ಲಂಕೆಯಲ್ಲಿ ಮಾಡಿದಂತೆ ಮಹಾರಾಷ್ಟ್ರಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ಎಚ್ಚರಿಕೆ ನೀಡಿದರು. ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗೆ ಅವಕಾಶ ನೀಡುವುದಿಲ್ಲ ಎಂದೂ ಅವರು ಬೆದರಿಕೆಯೊಡ್ಡಿದರು.

ಕುಣಬಿ ಮರಾಠಿಗಳ ರಕ್ತ ಸಂಬಂಧಿಕರ ಕುರಿತು ಕರಡು ಅಧಿಸೂಚನೆಯನ್ನು ಶಾಸನವನ್ನಾಗಿ ಪರಿವರ್ತಿಸಲು ಮಹಾರಾಷ್ಟ್ರ ಶಾಸಕಾಂಗದ ವಿಶೇಷ ಅಧಿವೇಶನವನ್ನು ಕರೆಯಬೇಕು ಎನ್ನುವುದು ಜಾರಂಗೆಯವರ ಬೇಡಿಕೆಗಳಲ್ಲೊಂದಾಗಿದೆ.

ಮರಾಠಾ ಸಮುದಾಯವನ್ನು ಒಬಿಸಿ ಗುಂಪಿಗೆ ಸೇರಿಸುವಂತೆ ಬೇಡಿಕೆಯೊಂದಿಗೆ ಜಾರಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಇದು ನಾಲ್ಕನೇ ಸಲವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News