×
Ad

ಪರಿಶಿಷ್ಟರಿಗೆ ಕೇವಲ ಅವಮಾನ ದೌರ್ಜನ್ಯ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್

Update: 2024-08-24 13:22 IST

ಹೊಸದಿಲ್ಲಿ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರನ್ನು ಅವಮಾನಿಸುವುದು, 1989 ರ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಲ್ಲ. ಒಂದು ವೇಳೆ ಜಾತಿಯನ್ನು ಹೀಯಾಳಿಸಲು ಅವಮಾನಿಸಿದರೆ ಅದು ಅಪರಾಧ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ ಎಂದು LiveLaw ವರದಿ ಮಾಡಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಿವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ಮರುನಾಡನ್ ಮಲಯಾಳಿ ಸಂಪಾದಕ ಶಾಜನ್ ಸ್ಕಾರಿಯಾ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ಈ ಹೇಳಿಕೆ ನೀಡಿದೆ. ಪಿವಿ ಶ್ರೀನಿಜಿನ್ ಅವರು ಕೇರಳದ ಕುನ್ನತುನಾಡಿನ ಶಾಸಕ.

ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್‌ ನಿರ್ವಹಿಸುತ್ತಿದ್ದ ಕ್ರೀಡಾ ಹಾಸ್ಟೆಲ್‌ನ ದುರಾಡಳಿತದ ಕುರಿತು ಶಾಜನ್ ಸ್ಕಾರಿಯಾ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಪಿವಿ ಶ್ರೀನಿಜಿನ್ ಅವರು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ.

"ನಾನು ಪರಿಶಿಷ್ಟ ಜಾತಿಗೆ ಸೇರಿದ ಪುಲಯ ಸಮುದಾಯಕ್ಕೆ ಸೇರಿದವನು ಎಂದು ತಿಳಿದೂ ಸಾಮಾನ್ಯ ಜನರಲ್ಲಿ ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಉದ್ದೇಶದಿಂದ ಸ್ಕಾರಿಯಾ ಅವರು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ" ಎಂದು ಶಾಸಕ ಶ್ರೀನಿಜಿನ್ ಆರೋಪಿಸಿದ್ದಾರೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.

ಜೂನ್ 2023 ರಲ್ಲಿ ಕೇರಳ ಹೈಕೋರ್ಟ್ ಎರ್ನಾಕುಲಂನ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ನಂತರ ಸ್ಕರಿಯಾ ಅವರು ಸುಪ್ರೀಂ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರನ್ನು ಅವಮಾನ ಮಾಡಿದಾಗ ಅದು "ಜಾತಿ ಆಧಾರಿತ ಅವಮಾನದ ಭಾವನೆ" ಯನ್ನು ಉಂಟುಮಾಡುವುದಿಲ್ಲ. ಒಂದು ವೇಳೆ ಜಾತಿಯನ್ನು ಉದ್ದೇಶಿಸಿ ಮಾಡಿದ ಅವಮಾನವು ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು live law ವರದಿ ಮಾಡಿದೆ.

ಸಂತ್ರಸ್ತ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಕಾಯ್ದೆಯ ಸೆಕ್ಷನ್ 3(1)(ಆರ್) ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಲು ಸಾಕಾಗುವುದಿಲ್ಲ ಎಂದು ಪೀಠವು ಹೇಳಿದೆ.

ಸ್ಕಾರಿಯಾ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಅವಮಾನ ಮಾಡಲಾಗಿದೆ ಎಂದು ಪ್ರಾಥಮಿಕವಾಗಿ ಸೂಚಿಸಲು ಏನೂ ಇಲ್ಲ ಎಂದು ನ್ಯಾಯಾಲಯವು ಗಮನಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವೀಡಿಯೊದಲ್ಲಿ ಮಾಡಲಾದ ಹಕ್ಕುಗಳ ಸತ್ಯತೆಯನ್ನು ನಿರ್ಣಯಿಸುವ ಅಗತ್ಯವಿಲ್ಲ ಎಂದು ಪೀಠವು ಹೇಳಿದೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಹಿಂದಿನ ಉದ್ದೇಶವು, ಜಾತಿ ಗುರುತಿನ ಕಾರಣದಿಂದ ಆ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಅವಮಾನಿಸುವ ಅಪರಾಧಗಳಿಗೆ ಶಿಕ್ಷೆಗೆ ಕಠಿಣ ನಿಬಂಧನೆಗಳನ್ನು ಒದಗಿಸುವುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News