ವಿಜಯನಗರ: ಎಸೆಸ್ಸೆಲ್ಸಿ ಟಾಪರ್ಸ್ ಗಳಿಗೆ ಸ್ಕೂಟಿ ವಿತರಿಸಿದ ಸಚಿವ ಝಮೀರ್ ಅಹ್ಮದ್ ಖಾನ್
ವಿಜಯನಗರ(ಹೊಸಪೇಟೆ): ಜಿಲ್ಲೆಯಲ್ಲಿ ಎಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ಸ್ಕೂಟಿಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಾಹನಗಳ ಕೀ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜಿಸಲು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೊಸಪೇಟೆಯ ಯಶವಂತ್ 625 ಕ್ಕೆ 624 ಅಂಕಗಳನ್ನು ಪಡೆದ ಹಿನ್ನಲೆಯಲ್ಲಿ ನಗದು ಒಂದು ಲಕ್ಷ ರೂ. ಸೇರಿ ಸ್ಕೂಟಿ ನೀಡಲಾಗಿದೆ. ಉಳಿದ ಐವರು ವಿದ್ಯಾರ್ಥಿಗಳಿಗೆ ನಿಹಾರ್, ಅಭಿಷೇಕ್, ಹೇಮಂತ್, ಉಮೇಶ್, ಲಕ್ಷ್ಮಿ ಇವರಿಗೆ ಸ್ಕೂಟಿ ಬೈಕ್ ಜೊತೆಗೆ ತಲಾ 50 ಸಾವಿರ ರೂಗಳನ್ನು ನೀಡಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ನೀಡಿರುವ ಸ್ಕೂಟಿಗಳನ್ನು 18 ವರ್ಷ ತುಂಬದೇ ಚಾಲನಾ ಪರವಾನಿಗೆ ಇಲ್ಲದ ಕಾರಣ ಲೈಸನ್ಸ್ ಹೊಂದುವವರೆಗೆ ತಮ್ಮ ಪೋಷಕರಿಗೆ ನೀಡಿ ಎಂದು ತಿಳಿಸಿ ಬೈಕನ್ನು ಉಡುಗೊರೆಯಾಗಿ ನೀಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಪ್ರಮುಖವಾಗಿ ಮೂರು ಹಂತಗಳು ಪ್ರಮುಖವಾಗಿದೆ. ಮೊದಲನೆಯ ಹಂತ 7ನೇ ತರಗತಿ, 10ನೇ ತರಗತಿ, ಪಿಯುಸಿ ಪ್ರಮುಖ ಘಟ್ಟವಾಗಿದೆ. ಈ ವರ್ಷ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಅತ್ಯುನ್ನತ ಅಂಕ ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ಸ್ಕೂಟಿ ಸೇರಿ ಐದು ಲಕ್ಷ ರೂ.ಗಳನ್ನು ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಗಿತ್ತು. ಅದೇ ಸಂಧರ್ಭದಲ್ಲಿ ಎಸ್ಸೆಸ್ಸೆಲ್ಸಿ ಟಾಪರ‍್ಸ್ಗಳಿಗೆ ಉಡುಗೊರೆ ನೀಡಲು ಪ್ರಸ್ತಾಪಿಸಲಾಗಿತ್ತು. ಅದರಂತೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಡಗೊರೆ ನೀಡಿ ಪ್ರೋತ್ಸಾಹಿಸಲಾಗಿದೆ ಎಂದರು.
ಜಿಲ್ಲೆ ಉತ್ತಮ ಫಲಿತಾಂಶ ಪಡೆದ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪರಿಗೆ ಗೌರವಿಸಿ ಸನ್ಮಾನಿಸಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದರು.
ಈ ವೇಳೆ ಕಂಪ್ಲಿ ಶಾಸಕ ಜೆ.ಗಣೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಬಿ.ಎಲ್, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ಉಪಸ್ಥಿತರಿದ್ದರು.