×
Ad

ಮೋದಿ ಸರಕಾರ ಫೆಲೆಸ್ತೀನ್ ಜನರನ್ನು ಕೈಬಿಟ್ಟಿದೆ: ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೆ ಕಾಂಗ್ರೆಸ್ ಟೀಕೆ

Update: 2026-02-24 20:35 IST

Photo : PTI

ಹೊಸದಿಲ್ಲಿ, ಫೆ. 24: ಭಾರತ ಸರಕಾರ ಫೆಲೆಸ್ತೀನ್ ಜನರನ್ನು ಕೈಬಿಟ್ಟಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

ಗಾಝಾದ ನಾಗರಿಕರ ಮೇಲೆ ಇಸ್ರೇಲ್ ನಿರ್ದಯವಾಗಿ ದಾಳಿ ಮುಂದುವರಿಸಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ತೆರಳುತ್ತಿದ್ದಾರೆ ಎಂದು ಅದು ಹೇಳಿದೆ.

ಫೆಲೆಸ್ತೀನ್ ಜನರ ಪರ ತನ್ನ ಬದ್ಧತೆಯ ಕುರಿತು ಮೋದಿ ಸರಕಾರ ಸಿನಿಕತನದ ಹಾಗೂ ಬೂಟಾಟಿಕೆಯ ಹೇಳಿಕೆಗಳನ್ನು ನೀಡುತ್ತದೆ. ಆದರೆ, ವಾಸ್ತವವಾಗಿ ಮೋದಿ ಸರಕಾರ ಫೆಲೆಸ್ತೀನ್‌ ಜನತೆಯನ್ನು ಕೈಬಿಟ್ಟಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಹೇಳಿದ್ದಾರೆ.

ಆಕ್ರಮಿತ ಪಶ್ಚಿಮದಂಡೆಯಲ್ಲಿ ಸಾವಿರಾರು ಫೆಲೆಸ್ತೀನ್ ಜನರನ್ನು ಇಸ್ರೇಲ್ ಹೊರ ಹಾಕುವುದು ಹಾಗೂ ಸ್ಥಳಾಂತರಿಸುವುದು ತೀವ್ರಗೊಂಡಿದೆ. ಇದು ಪ್ರಪಂಚದಾದ್ಯಂತ ಖಂಡನೆಗೆ ಗುರಿಯಾಗಿದೆ ಎಂದು ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.

ಗಾಝಾದಲ್ಲಿರುವ ನಾಗರಿಕರ ಮೇಲೆ ಇಸ್ರೇಲ್‌ನ ನಿರ್ದಯ ದಾಳಿ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ವಾಯು ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ಇಸ್ರೇಲ್ನ ಪ್ರತಿಪಕ್ಷ ನೆತನ್ಯಾಹು ಅವರು ದೇಶದ ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. ಆದುದರಿಂದ ಅದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ಸಂಸತ್ತಿನಲ್ಲಿ ಮಾಡುವ ಭಾಷಣವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News