×
Ad

ಮಧ್ಯ ಪ್ರದೇಶ: ಶಂಕಿತ ದರೋಡೆಕೋರರಿಂದ ಸ್ಥಳೀಯ ಬಿಜೆಪಿ ನಾಯಕ, ಪತ್ನಿಯ ಹತ್ಯೆ

Update: 2024-01-27 16:41 IST

ಸಾಂದರ್ಭಿಕ ಚಿತ್ರ

ಉಜ್ಜಯಿನಿ(ಮ.ಪ್ರ): ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ಪಿಪ್ಲೋಡಾ ಗ್ರಾಮದಲ್ಲಿ ಶಂಕಿತ ದರೋಡೆಕೋರರು ಸ್ಥಳೀಯ ಬಿಜೆಪಿ ನಾಯಕ ಮತ್ತು ಆತನ ಪತ್ನಿಯನ್ನು ಹತ್ಯೆ ಮಾಡಿದ್ದಾರೆ.

ಘಟನೆಯು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಪೋಲಿಸರು ತಿಳಿಸಿದರು.

ಮಾಜಿ ಸರಪಂಚ ರಾಮನಿವಾಸ ಕುಮಾವತ್ ಮತ್ತು ಅವರ ಪತ್ನಿ ಮುನ್ನಿಬಾಯಿಯನ್ನು ಹರಿತವಾದ ಆಯುಧದಿಂದ ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳಿಂದ ದರೋಡೆ ಯತ್ನದ ಸಂದರ್ಭದಲ್ಲಿ ಈ ಕೊಲೆಗಳು ನಡೆದಿರಬಹುದು. ಮನೆಯಲ್ಲಿ ದಂಪತಿ ಮಾತ್ರ ಇದ್ದು ಕೆಲವು ಜನರು ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸಿ ಮೊದಲು ಮುನ್ನಿಬಾಯಿಯನ್ನು ಮತ್ತು ನಂತರ ಕುಮಾವತ್‌ರನ್ನು ಹತ್ಯೆಗೈದಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ಗುರುಪ್ರಸಾದ ಪರಾಶರ ತಿಳಿಸಿದರು.

ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಲಾಕರ್‌ಗಳು ಯಥಾಸ್ಥಿತಿಯಲ್ಲಿದ್ದು, ದಾಸ್ತಾನು ಕೊಠಡಿ ಸುರಕ್ಷಿತವಾಗಿದೆ. ಸಿಸಿಟಿವಿ ಪರದೆಗೆ ಹಾನಿಯನ್ನುಂಟು ಮಾಡಲಾಗಿದೆ ಎಂದರು.

ಮೃತ ಕುಮಾವತ್ ದಂಪತಿಗೆ ಇಬ್ಬರು ಪುತ್ರರಿದ್ದಾರಾದರೂ ಅವರು ಗ್ರಾಮದಲ್ಲಿ ಹೆತ್ತವರೊಂದಿಗೆ ವಾಸವಾಗಿಲ್ಲ. ಕುಮಾವತ್ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದರು.

ಉಜ್ಜಯಿನಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ಜಿಲ್ಲೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News