ಅಮೆರಿಕಾದ ಗಾಯಕಿಗೆ ಸಂಸದೆ ಪ್ರಿಯಾಂಕಾ ಚತುರ್ವೇದಿ ತಿರುಗೇಟು
ಸಂಸದೆ ಪ್ರಿಯಾಂಕಾ ಚತುರ್ವೇದಿ (PTI) ಅಮೆರಿಕಾದ ಗಾಯಕಿ-ನಟಿ ಮೇರಿ ಮಿಲ್ಬೆನ್(MarryMillben/X)
ಹೊಸದಿಲ್ಲಿ: ಜನಸಂಖ್ಯೆ ನಿಯಂತ್ರಣದ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ ಹೇಳಿಕೆಯ ಸುತ್ತ ಹರಡಿರುವ ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಅಮೆರಿಕಾದ ಗಾಯಕಿ-ನಟಿ ಮೇರಿ ಮಿಲ್ಬೆನ್ ವಿರುದ್ಧ ಶಿವಸೇನೆ ನಾಯಕಿ (ಉದ್ಧವ್ ಬಣ) ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕಿಡಿಕಾರಿದ್ದಾರೆ.
ಮೇರಿ ಮಿಲ್ಬೆನ್ ಅವರು ಮೂರು ನಿಮಿಷದ ವೀಡಿಯೋವನ್ನು x ನಲ್ಲಿ ಪೋಸ್ಟ್ ಮಾಡಿ ನಿತೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಾನು ಭಾರತದ ನಾಗರಿಕಳಾಗಿದ್ದರೆ ಪೂರ್ವದ ಈ ರಾಜ್ಯಕ್ಕೆ ವಲಸೆ ಬಂದು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದುದಾಗಿ ಹೇಳಿದರು. ಆಕೆ 2024 ಲೋಕಸಭಾ ಚುನಾವಣೆಯ ಬಗ್ಗೆಯೂ ಮಾತನಾಡಿ ದೇಶವನ್ನು ಮುನ್ನಡೆಸಲು ಪ್ರಧಾನಿ ನರೇಂದ್ರ ಮೋದಿ ಸೂಕ್ತರು ಎಂಬರ್ಥದ ಮಾತುಗಳನ್ನಾಡಿ ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಯ ಬಗ್ಗೆಯೂ ಮಾತನಾಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ ಚತುರ್ವೇದಿ “ಮೇರಿ ಮಿಲ್ಬೆನ್ ಅವರಿಗೆ ಮಣಿಪುರದ ಬಗ್ಗೆ ಅಭಿಪ್ರಾಯವಿದೆ. ಅವರಿಗೆ ಬಿಹಾರ ಸಿಎಂ ಬಗ್ಗೆ ಅಭಿಪ್ರಾಯವಿದೆ. 2024ರಲ್ಲಿ ಯಾರಿಗೆ ಮತ ಹಾಕಬೇಕೆಂಬ ಕುರಿತು ಮೇರಿ ಮಿಲ್ಬೆನ್‌ಗೆ ಅಭಿಪ್ರಾಯವಿದೆ. ಮೇರಿ ಮಿಲ್ಬೆನ್ ತನ್ನ ಯುಎಸ್ ಪೌರತ್ವ ತೊರೆದು ಭಾರತಕ್ಕೆ ಬಂದು ಇಲ್ಲಿನ ಪೌರತ್ವ ಪಡೆದು ನಂತರ ಮೋದಿಜಿ ಸರ್ಕಾರದ ಜಾದೂವನ್ನು ನಿಜವಾಗಿಯೂ ಅನುಭವಿಸಬೇಕು. ಅಲ್ಲಿಯ ತನಕ ಮೇಡಂ, ದಯವಿಟ್ಟು ಕುಳಿತುಕೊಳ್ಳಿ,” ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿಯ ಅಮೆರಿಕಾ ಭೇಟಿ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ್ದ ಮತ್ತು ಮೋದಿಯ ಪಾದ ಮುಟ್ಟಿದ್ದ ಮಿಲ್ಬೆನ್ ಅವರು ತಮ್ಮ ವೀಡಿಯೋ ಸಂದೇಶದಲ್ಲಿ “ ಬಿಹಾರವನ್ನು ಮುನ್ನಡೆಸಲು ಮಹಿಳೆಯನ್ನು ಸಬಲೀಕರಿಸಬೇಕು,” ಎಂದು ಬಿಜೆಪಿಗೆ ಕರೆ ನೀಡಿದ್ದಾರೆ.
“ಇಂದು ಭಾರತದ ಬಿಹಾರದಲ್ಲಿ ಮಹಿಳೆಯ ಮೌಲ್ಯಕ್ಕೆ ಸವಾಲೆಸೆಯುವ ಕ್ಷಣ ಎದುರಾಗಿದೆ. ಈ ಸವಾಲಿಗೆ ಒಂದೇ ಉತ್ತರವಿದೆ ಎಂದು ನಾನು ನಂಬಿದ್ದೇನೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ ಅವರ ಹೇಳಿಕೆಯ ನಂತರ ನಾನಂದುಕೊಂಡಿರುವೆ, ಓರ್ವ ದಿಟ್ಟ ಮಹಿಳೆ ಎದ್ದು ನಿಂತು ಬಿಹಾರ ಸೀಎಂ ಹುದ್ದಗೆ ತನ್ನ ಅಭ್ಯರ್ಥಿತನ ಘೋಷಿಸಬೇಕು. ನಾನು ಭಾರತದ ನಾಗರಿಕಳಾಗಿದ್ದರೆ, ಬಿಹಾರಕ್ಕೆ ತೆರಳಿ ಅಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ,” ಎಂದು ಮಿಲ್ಬೆನ್ ಹೇಳಿದ್ದರು.