ವಿವಾದದ ಕಿಡಿ ಹೊತ್ತಿಸಿದ ಮುಂಬೈ ಜೈನ ದೇಗುಲ ಧ್ವಂಸ ಪ್ರಕರಣ
PC : NDTV
ಮುಂಬೈ: ಮಹಾನಗರದ ವಿಲ್ ಪಾರ್ಲೆ ಪ್ರದೇಶದಲ್ಲಿ ಜೈನ ದೇಗುಲವೊಂದನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಧ್ವಂಸಗೊಳಿಸಿದ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ. ಘಟನೆಯನ್ನು ಖಂಡಿಸಿ ಜೈನ ಸಮುದಾಯದವರು ಪ್ರತಿಭಟನಾ ಜಾಥ ನಡೆಸಿದ ಬೆನ್ನಲ್ಲೇ ಬಿಎಂಸಿ ಸಹಾಯಕ ಪಾಲಿಕೆ ಆಯುಕ್ತರನ್ನು ವರ್ಗಾವಣೆ ಮಾಡಿದೆ.
ಕೆ-ಪೂರ್ವ ವಾರ್ಡ್‍ನ ಉಸ್ತುವಾರಿ ಹೊಂದಿದ್ದ ನವನಾಥ್ ಘಾಡ್ಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ ವರ್ಗಾವಣೆ ಮಾಡಿದ್ದಾರೆ.
ಏಪ್ರಿಲ್ 16ರಂದು ಕೆ-ಪೂರ್ವ ವಾರ್ಡ್‍ನ ಅಧಿಕಾರಿಗಳು ನೇಮಿನಾಥ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಆವರಣದಲ್ಲಿ ಇದ್ದ ಚೈತ್ಯಾಲಯ ಅಥವಾ ಜೈನ ಮಂದಿರವನ್ನು ಧ್ವಂಸಗೊಳಿಸಿದ್ದರು. ಇದು ಅಕ್ರಮ ಕಟ್ಟಡ ಎಂದು ಕಾರಣ ನೀಡಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಇದನ್ನು ಖಂಡಿಸಿ ಜೈನ ಸಮುದಾಯದವರು ಶನಿವಾರ ಬೃಹತ್ ಪ್ರತಿಭಟನೆ ಕೈಗೊಂಡರು. ಧಾರ್ಮಿಕ ಮುಖಂಡರು, ಸಚಿವ ಮಂಗಲ್ ಪ್ರಸಾದ್ ಲೋಧಾ, ಬಿಜೆಪಿ ಶಾಸಕ ಪರಾಗ್ ಅಲವಾನಿ ಸೇರಿದಂತೆ ಹಲವು ಮುಖಂಡರು, 20 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಮಹಾರಾಷ್ಟ್ರ ಗೋಶಾಲಾ ಸಂಘದ ಪರೇಶ್ ಶಾ ಹೇಳಿದ್ದಾರೆ.
ಮನವಿಪತ್ರ ಸಲ್ಲಿಸಿದ ಬಳಿಕ ಘಾಡ್ಗೆಯವರ ಜತೆ ಸುಮಾರು ಎರಡು ಗಂಟೆ ಕಾಲ ನಿಯೋಗ ಚರ್ಚೆ ನಡೆಸಿತು. ಇಡೀ ಜೈನ ಸಮುದಾಯ ಬಿಎಂಸಿ ಕ್ರಮದಿಂದ ಆಕ್ರೋಶಗೊಂಡಿದೆ. ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಬೇಕು. ಟ್ರಸ್ಟಿಗಳು ಪ್ರತಿಕ್ರಿಯಿಸಲು ಅವಕಾಶ ನೀಡದೇ ಮಂದಿರ ಕೆಡವಲಾಗಿದೆ ಎಂದು ಶಾ ದೂರಿದರು.
ಬಿಎಂಸಿ ಕಚೇರಿಯನ್ನು ಸಿಎಂ ಕಚೇರಿ ಮತ್ತು ನಗರಾಭಿವೃದ್ಧಿ ಸಚಿವರ ಕಚೇರಿ ನಿಯಂತ್ರಿಸುತ್ತಿದ್ದು, ಇದರ ಹೊಣೆಯನ್ನು ಈ ಎರಡು ಕಚೇರಿಗಳು ಹೊರಬೇಕು ಎಂದು ಶಿವಸೇನೆ (ಯುಬಿಟ) ಮುಖಂಡ ಹಾಗೂ ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ. ನಗರಾಭಿವೃದ್ಧಿ ಖಾತೆಯನ್ನು ಮಾಜಿ ಸಿಎಂ ಏಕನಾಥ ಶಿಂಧೆ ನಿಭಾಯಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದರು ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ವರ್ಷಾ ಗಾಯಕ್ವಾಡ್ ಮಾತನಾಡಿ, ನ್ಯಾಯಾಲಯದ ತೀರ್ಪಿಗೆ ಕಾಯದೇ ಬಿಎಂಸಿ ಅಧಿಕಾರಿಗಳು ಆತುರದ ಕ್ರಮ ಕೈಗೊಂಡಿದ್ದಾರೆ ಎಂಧು ಆಪಾದಿಸಿದರು. ಕಾರ್ಯಾಚರಣೆ ವೇಳೆ ಜೈನ ತೀರ್ಥಂಕರರ ವಿಗ್ರಹಗಳಿಗೆ ಮತ್ತು ಗ್ರಂಥಗಳನ್ನು ಅವಮಾನಿಸಲಾಗಿದೆ ಎಂದು ದೂರಿದರು.