ನಾಗಾಲ್ಯಾಂಡ್: ಭಾರೀ ಮಳೆ, ನೆರೆ; ಮೂವರು ಮೃತ್ಯು, ವಿಮಾನ ಸಂಚಾರ ರದ್ದು
PC : PTI
ಕೋಹಿಮಾ: ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಗಾಲ್ಯಾಂಡ್ ನಾದ್ಯಂತ ನೆರೆ ಸೃಷ್ಟಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 29ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಓರ್ವ ಮಹಿಳೆ ಸೇರಿದಂತೆ ಮೂವರು ದಿಮಾಪುರದ ತಮ್ಮ ಮನೆಯಲ್ಲಿ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ನೆರೆ ನೀರು ವಸತಿ ಪ್ರದೇಶಕ್ಕೆ ನುಗ್ಗಿದ್ದು, ಎದೆ ಮಟ್ಟದ ನೀರಿನಲ್ಲಿ ಜನರು ಸಂಚರಿಸುತ್ತಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಧಿಮಾಪುರ ವಿಮಾನ ನಿಲ್ದಾಣದ ರನ್‌ವೇ ಹಾಗೂ ಪಾರ್ಕಿಂಗ್ ಪ್ರದೇಶಗಳು ಜಲಾವೃತವಾಗಿದ್ದು, ವಿಮಾನಗಳ ಸಂಚಾರವನ್ನು ರವಿವಾರ ಸಂಪೂರ್ಣವಾಗಿ ರದ್ದುಗೊಳಿಸಲಾಯಿತು ಎಂದು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.
ಇಂಡಿಗೊ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಕೋಹಿಮಾದೊಂದಿಗೆ ದಿಮಾಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 29ರಲ್ಲಿ ನೆರೆಯಿಂದ ತೀವ್ರ ತೊಂದರೆ ಉಂಟಾಯಿತು.
ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ನಾಲ್ಕು ಪಥದ ಹೆದ್ದಾರಿಯ ರಸ್ತೆಗಳಲ್ಲಿ ತಡೆ ಉಂಟಾಯಿತು. ಇದು ವಾಹನ ಸಂಚಾರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಮಾಪುರ, ಕೋಹಿಮಾ ಹಾಗೂ ನಿಯುಲ್ಯಾಂಡ್ ಅತಿ ಹೆಚ್ಚು ಹಾನಿಗೀಡಾದ ಜಿಲ್ಲೆಗಳಾಗಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಮನೆಗಳು, ಮೀನುಗಾರಿಕೆ ಹಾಗೂ ಭತ್ತದ ಗದ್ದೆಗಳಿಗೆ ವ್ಯಾಪಕ ಹಾನಿ ಯಾಗಿದೆ. ಇದರಿಂದ ಆಹಾರ ಭದ್ರತೆಯ ಭೀತಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.