×
Ad

ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ | ಬ್ಯಾಂಕಿಂಗ್, ಸಾರಿಗೆ ಸೇವೆಗಳು ವ್ಯತ್ಯಯ, ಜನಜೀವನ ಅಸ್ತವ್ಯಸ್ಥ

Update: 2026-02-12 16:09 IST

Photo Credit : PTI 

ಹೊಸ ದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಕೆಲವು ರಾಜ್ಯಗಳಲ್ಲಿ ಜನ ಜೀವನದ ಮೇಲೆ ಪ್ರಭಾವ ಬೀರಿದೆ. ಬ್ಯಾಂಕಿಂಗ್ ಹಾಗೂ ಸಾರಿಗೆ ಸೇವೆಗಳು ವ್ಯತ್ಯಯಗೊಂಡಿವೆ.

ಈ ಭಾರತ ಬಂದ್ ಗೆ ಇಂಟಕ್, ಐಟಕ್, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್ಇಡಬ್ಲ್ಯೂ, ಎಐಸಿಸಿಟಿಯು, ಎಲ್ಪಿಎಫ್ ಹಾಗೂ ಯುಟಿಯುಸಿ ಸೇರಿದಂತೆ ಹತ್ತು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿತ್ತು. ರಾಷ್ಟ್ರಾದ್ಯಂತ ನಡೆಯುತ್ತಿರುವ ಈ ಮುಷ್ಕರದಲ್ಲಿ ಸುಮಾರು 30 ಕೋಟಿ ಕಾರ್ಮಿಕರು ಪಾಲ್ಗೊಂಡಿದ್ದಾರೆ ಎಂದು ಈ ವೇದಿಕೆ ಹೇಳಿದೆ.

ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ಉದ್ಯೋಗ ಭದ್ರತೆಯನ್ನು ಕಡಿತಗೊಳಿಸುವ ಮತ್ತು ಉದ್ಯೋಗದಿಂದ ತೆಗೆದು ಹಾಕಲು ಅವಕಾಶ ನೀಡುವ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದಲ್ಲದೆ, ಮನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು. ವಿಬಿ ಜಿ ರಾಮ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಅಸ್ಸಾಂ, ತಮಿಳುನಾಡು, ಪಾಂಡಿಚೇರಿ, ಕೇರಳ, ಒಡಿಶಾ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂಬ ವರದಿಗಳು ಬರುತ್ತಿವೆ. ದಿಲ್ಲಿಯ ಕೈಗಾರಿಕಾ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಮೆರವಣಿಗೆಗಳು ನಡೆಯುತ್ತಿವೆ ಹಾಗೂ ರಸ್ತೆಗಳ ಮೇಲೆ ಜನಸಂಚಾರ ವಿರಳವಾಗಿದೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಕೌರ್ ತಿಳಿಸಿದ್ದಾರೆ.

ಕೇರಳದಲ್ಲಿ ಜನಜೀವನ ಅಸ್ತವ್ಯಸ್ತ:

ಭಾರತ ಬಂದ್‌ನಿಂದಾಗಿ ಕೇರಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಸರಕಾರಿ ಕಚೇರಿಗಳಲ್ಲಿಯೂ ವಿರಳವಾಗಿರುವುದು ಕಂಡುಬಂದಿದೆ.

ಗೋವಾದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಿಮಾ ಕಂಪೆನಿಗಳು ಮುಚ್ಚಿದ್ದವು. ಕೆಲವು ಕೈಗಾರಿಕಾ ಘಟಕಗಳ ಮೇಲೂ ಮುಷ್ಕರ ಪರಿಣಾಮ ಬೀರಿದೆ.

ಪಶ್ಚಿಮ ಬಂಗಾಳದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರೀಯ ಕಾರ್ಮಿಕ ಒಕ್ಕೂಟಗಳ ಜಂಟಿ ವೇದಿಕೆ ಗುರುವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಪಶ್ಚಿಮಬಂಗಾಳದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಬ್ಯಾಂಕ್‌ಗಳು ಹಾಗೂ ಕೈಗಾರಿಕಾ ವಲಯಗಳ ದೈನಂದಿನ ಕಾರ್ಯನಿರ್ವಹಣೆ ತೊಂದರೆಗೀಡಾದವು.

ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮಬಂಗಾಳದಲ್ಲಿ ‘ಬಂಗಾಳ ಉಳಿಸಿ’ ಆಂದೋಲನಕ್ಕೆ ಕರೆ ನೀಡಿರುವ ಸಿಐಟಿಯು, ಎಐಟಿಯುಸಿ ಹಾಗೂ ಯುಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಕೈಗಾರಿಕಾ ಪಟ್ಟಣಗಳಾದ ದುರ್ಗಾಪುರ ಹಾಗೂ ಹಾಲ್ದಿಯಾಗಲ್ಲಿನ ಕಾರ್ಖಾನೆಗಳ ಮುಂದುಗಡೆೆ ಪ್ರತಿಭಟನೆ ನಡೆಸಿದರು.

ಮುಷ್ಕರವು ಹಲವಾರು ಸಾರ್ವಜನಿಕ ಹಾಗೂ ಖಾಸಗಿರಂಗದ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿದರೂ, ಭಾರತೀಯ ಸ್ಟೇಟ್‌ಬ್ಯಾಂಕ್‌ನ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News