×
Ad

ಸಂರಕ್ಷಿತ ಪ್ರದೇಶಗಳಲ್ಲಿ ಜಲ ವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡುವ ನೀತಿಗೆ ಅನುಮೋದನೆ ನೀಡಿದ ನೇಪಾಳ ಸರ್ಕಾರ : ಪರಿಸರವಾದಿಗಳ ಆಕ್ರೋಶ

Update: 2024-01-23 21:04 IST

Photo: scroll.in

ಕಠ್ಮಂಡು : ದೇಶದೊಳಗಿನ ಸಂರಕ್ಷಿತ ಪ್ರದೇಶಗಳಲ್ಲಿ ಬೃಹತ್ ಜಲ ವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಅನುಮತಿ ನೀಡುವ ವಿವಾದಾತ್ಮಕ ಪ್ರಸ್ತಾಪಕ್ಕೆ ನೇಪಾಳ ಸರ್ಕಾರ ಅನುಮೋದನೆ ನೀಡಿದ್ದು, ಈ ನಡೆಯು ಭಾರಿ ಹಿನ್ನಡೆಯಾಗಿದೆ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.

“ಸಂರಕ್ಷಿತ ಪ್ರದೇಶಗಳಲ್ಲಿ ಭೌತಿಕ ಮೂಲಸೌಕರ್ಯಗಳ ನಿರ್ಮಾಣ” ನೀತಿಯನ್ನು ಜನವರಿ 4ರಂದು ರಾಷ್ಟ್ರೀಯ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ನೀತಿಯು ಸಂಪೂರ್ಣವಾಗಿ ಸಂರಕ್ಷಿತ ಪ್ರದೇಶಗಳಲ್ಲಿ ಯೋಜನೆಗಳನ್ನು ನಿರ್ಮಿಸಲು ಜಲ ವಿದ್ಯುತ್ ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ. ಈ ಹಿಂದಿನ ಅಗತ್ಯಗಳಿಗೆ ಹೋಲಿಸಿದರೆ, ಕೇವಲ ತೀವ್ರ ಬರಗಾಲದಲ್ಲಿ ಮಾತ್ರ ಕೊಂಚ ಮಟ್ಟದ ನೀರನ್ನು ನದಿಗೆ ಬಿಡಲಾಗುತ್ತದೆ ಹಾಗೂ ಸಂರಕ್ಷಿತ ಪ್ರದೇಶದೊಳಗೆ ಜಲ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸುಲಭವಾಗಿ ಭೂಸ್ವಾಧೀನಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಹೇಳಲಾಗಿದೆ.

“ಇದು ನೇಪಾಳದಲ್ಲಿನ ಪರಿಸರವಾದ ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಕಳೆದ ಹಲವಾರು ದಶಕಗಳಲ್ಲಿ ತೀವ್ರ ಪರಿಶ್ರಮದಿಂದ ಗಳಿಸಿರುವ ಯಶಸ್ಸಿಗೆ ದೊಡ್ಡ ಅಪಾಯ ತಂದೊಡ್ಡಲಿದೆ” ಎಂದು ನೈಸರ್ಗಿಕ ಸಂಪನ್ಮೂಲಗಳ ವಕೀ ದಿಲ್ರಾಜ್ ಖನಲ್ ಹೇಳುತ್ತಾರೆ.

ಈಗಲೂ ಉತ್ತಮವಾಗಿ ಸಂರಕ್ಷಿಸಿಕೊಂಡು ಬರಲಾಗಿರುವ ಸಂರಕ್ಷಿತ ಪ್ರದೇಶಗಳಲ್ಲಿ ಜಲ ವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡುವ ಹೊಸ ನೀತಿಯ ವಿರುದ್ಧ ಪ್ರಖ್ಯಾತ ಪರಿಸರವಾದಿಗಳು, ವಕೀಲರು ಹಾಗೂ ಮೂಲನಿವಾಸಿ ಸಮುದಾಯಗಳು ಕಳವಳ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ನೇಪಾಳ ಸರ್ಕಾರ ಈ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ. ಈ ಬದಲಾವಣೆಗಳು ಕೇವಲ ಕಾನೂನು ಉಲ್ಲಂಘನೆ ಮಾತ್ರವಲ್ಲ; ಬದಲಿಗೆ ಹವಾಮಾನ ಬದಲಾವಣೆ ಪರಿಣಾಮಗಳ ಹೊರತಾಗಿಯೂ ಇತ್ತೀಚಿನ ದಶಕಗಳಲ್ಲಿ ನೇಪಾಳ ಪರಿಸರ ಸಂರಕ್ಷಣೆಯಿಂದ ಪಡೆದಿರುವ ಲಾಭಗಳನ್ನು ಹೂತು ಹಾಕಲಿದೆ ಎಂದೂ ಅವರು ಎಚ್ಚರಿಸುತ್ತಾರೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿರುವ ಪ್ರಸ್ತಾವನೆಯೊಂದಿಗೆ ಮುಂದುವರಿಯದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಪರಿಸರವಾದಿಗಳು ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಪ್ರಾಥಮಿಕ ಹಾಗೂ ಅಂತಿಮ ಕರಡು ದಾಖಲೆಯನ್ನು ಹೋಲಿಕೆ ಮಾಡಿದಾಗ, ಅಧಿಕಾರಿಗಳು ಈ ಪ್ರತಿಕ್ರಿಯೆಗಳನ್ನು ಪ್ರತಿಫಲಿಸುವಂಥ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಕರಡು ದಾಖಲೆಗೆ ಮಾಡಿಲ್ಲದಿರುವುದು ಕಂಡು ಬಂದಿದೆ.

“ನಾವು ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಚಿಂತಿಸುತ್ತಿದ್ದೇವೆ” ಎನ್ನುತ್ತಾರೆ ಖನಲ್.

ನೇಪಾಳವು 12 ರಾಷ್ಟ್ರೀಯ ಉದ್ಯಾನವನಗಳು, ಒಂದು ವನ್ಯಜೀವಿ ಮೀಸಲು ಅರಣ್ಯ, ಒಂದು ಬೇಟೆ ಮೀಸಲು ಪ್ರದೇಶ, ಆರು ಸಂರಕ್ಷಿತ ಪ್ರದೇಶಗಳು ಹಾಗೂ 13 ಬಫರ್ ವಲಯಗಳ ತವರಾಗಿದೆ. ಈ ಪ್ರದೇಶದ ವ್ಯಾಪ್ತಿಯು ಇಡೀ ದೇಶದ ಒಟ್ಟಾರೆ ವಿಸ್ತೀರ್ಣದ ಕಾಲು ಭಾಗದಷ್ಟಿದ್ದು, ನೆಲ ಮಟ್ಟದ ತೆರಾಯಿ ಆರ್ಕ್ ನಿಂದ ಹಿಮಾಲಯದ ಎತ್ತರದವರೆಗೂ ವ್ಯಾಪಿಸಿಕೊಂಡಿದೆ ಎಂದು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಸಂರಕ್ಷಣಾ ಇಲಾಖೆಯು ಹೇಳುತ್ತದೆ. ರಾಷ್ಟ್ರೀಯ ಉದ್ಯಾನವನಗಳನ್ನು ನಿರ್ಮಿಸಲು ಕೆಲವು ಸ್ಥಳೀಯ ಸಮುದಾಯಗಳನ್ನು ದಕ್ಷಿಣ ನೆಲ ಮಟ್ಟದಿಂದ ಪ್ರದೇಶಗಳಿಂದ ತೆರವುಗೊಳಿಸಿದ್ದರೂ, ಕೆಲವು ಜನರು ಈಗಲೂ ಸಾಗರ್ ಮಾತಾ (ಎವರೆಸ್ಟ್), ಲ್ಯಾಂಗ್ ಟ್ಯಾಂಗ್ ಮತ್ತು ಅನ್ನಪೂರ್ಣದಂಥ ರುದ್ರರಮಣೀಯ ಪ್ರೇಕ್ಷಣೀಯ ಚಾರಣ ಮಾರ್ಗಗಳಲ್ಲಿ ಈಗಲೂ ವಾಸಿಸುವುದನ್ನು ಮುಂದುವರಿಸಿದ್ದಾರೆ.

“ಹೊಸ ವಿಧಾನಗಳು ಹಲವಾರು ಪ್ರಶ್ನೆಗಳನ್ನೆತ್ತುತ್ತವೆ” ಎನ್ನುತ್ತಾರೆ ಸರ್ಕಾರೇತರ ಸಂಸ್ಥೆಯಾದ ಗ್ರೀನ್ ಹುಡ್ ನೇಪಾಳ್ ಎಂಬ ಸರ್ಕಾರೇತರ ಸಂಸ್ಥೆಯ ಕುಮಾರ್ ಪೌಡೆಲ್. “ಇದು ಎತ್ತುವ ಪ್ರಮುಖ ಪ್ರಶ‍್ನೆಯೆಂದರೆ: ಯಾರ ಸಂರಕ್ಷಿತ ಪ್ರದೇಶವಿದು?” ಎಂದು ಸ್ಥಳೀಯ ಸಮುದಾಯಗಳಿಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಬಿಗಿಯಾದ ನಿರ್ಬಂಧಗಳನ್ನು ವಿಧಿಸಿ, ಮೂಲಸೌಕರ್ಯ ಕಂಪನಿಗಳಿಗೆ ಜಲ ವಿದ್ಯುತ್ ಯೋಜನೆಯ ಘಟಕಗಳನ್ನು ನಿರ್ಮಿಸಲು ಈ ನಿಯಮಾವಳಿಗಳಿಂದ ವಿನಾಯಿತಿ ನೀಡಿರುವ ಕುರಿತು ಅವರು ಪ್ರಶ್ನಿಸುತ್ತಾರೆ.

ತೀವ್ರ ವಿದ್ಯುತ್ ಕೊರತೆಗೆ ಪ್ರತಿಯಾಗಿ ನೇಪಾಳ ಸರ್ಕಾರ ಹಾಗೂ ಖಾಸಗಿ ವಲಯದ ಕಂಪನಿಗಳು ಹಲವಾರು ದಶಕಗಳಿಂದ ದೊಡ್ಡ ಪ್ರಮಾಣದಲ್ಲಿ ಜಲ ವಿದ್ಯುತ್ ಯೋಜನೆಯಲ್ಲಿ ಬಂಡವಾಳ ತೊಡಗಿಸಿವೆ. ಇಂದು ನೇಪಾಳದ ಹತ್ತಾರು ಅಣೆಕಟ್ಟುಗಳು ಸ್ವದೇಶಿ ಬಳಕೆಗೆ ಮಾತ್ರವಲ್ಲದೆ, ನೆರೆಯ ಭಾರತ ಮತ್ತು ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿಯನ್ನು ರಫ್ತು ಮಾಡಲೂ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. ಇತ್ತೀಚೆಗೆ ಭಾರತವು ಮುಂದಿನ 25 ವರ್ಷಗಳ ಅವಧಿಯಲ್ಲಿ 10,000 ಮೆಗಾ ವ್ಯಾಟ್ ವಿದ್ಯುತ್ ಅನ್ನು ನೇಪಾಳದಿಂದ ಆಮದು ಮಾಡಿಕೊಳ್ಳುವ ಕರಾರಿಗೆ ಸಹಿ ಹಾಕಿರುವುದರಿಂದ ಈ ಸ್ವಚ್ಛ ಇಂಧನಕ್ಕೆ ಚಿನ್ನದ ಬೇಡಿಕೆ ಬಂದಿದೆ.

ಆದರೆ, ನೇಪಾಳದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದ ಬಳಿ ಸ್ಪಷ್ಟವಾದ ನೀಲ ನಕ್ಷೆ ಇಲ್ಲ. ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆ ನಡುವೆ ಸೂಕ್ತ ಮೌಲ್ಯಮಾಪನ ನಡೆಸದೆ ದೇಶದ ಎಲ್ಲ ಭಾಗಗಳಲ್ಲೂ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ, ಮೂಲಭೂತ ಸೌಕರ್ಯಗಳಾದ ಅಣೆಕಟ್ಟೆಗಳು, ವಿದ್ಯುತ್ ಸರಬರಾಜು, ವಿದ್ಯುತ್ ಮಾರ್ಗಗಳು ಹಾಗೂ ಪ್ರವೇಶ ರಸ್ತೆಗಳನ್ನು ಸಮನ್ವಯವಿಲ್ಲದ ರೀತಿಯಲ್ಲಿ ನಿರ್ಮಿಸಲಾಗಿದೆ.

ಆದರೆ, ಸಂರಕ್ಷಿತ ಪ್ರದೇಶಗಳಲ್ಲಿದ್ದ ನದಿಗಳು ಈ ನಿರ್ಮಾಣ ಚಟುವಟಿಕೆಗಳು ಅಣೆಕಟ್ಟು ನಿರ್ಮಾಣಗಳ ಹುಚ್ಚಿನಿಂದ ಮುಕ್ತವಾಗಿದ್ದವು. ಆದರೆ, 15 ವರ್ಷಗಳ ಹಿಂದೆ ಜಾರಿಯಾಗಿದ್ದ ನೀತಿಯ ಬದಲಿಗೆ ಜಾರಿಯಾಗಿರುವ ನೂತನ ನೀತಿಯು ಎಲ್ಲವನ್ನೂ ಬದಲಿಸಿದೆ. ಈ ಹಿಂದಿನ ನೀತಿಯು ಇಡೀ ರಾಷ್ಟ್ರೀಯ ಉದ್ಯಾನವನ ಅಥವಾ ಸಂರಕ್ಷಿತ ಪ್ರದೇಶವನ್ನು ಆವರಿಸಿಕೊಳ್ಳುವಂತಹ ವಿದ್ಯುತ್ ಯೋಜನೆಯ ಅಭಿವೃದ್ಧಿಯನ್ನು ನಿಷೇಧಿಸಿದರೆ, ನೂತನ ನೀತಿಯು ಅದಕ್ಕೆ ಮುಕ್ತ ರಹದಾರಿ ಕಲ್ಪಿಸಿದೆ.

ಈ ಹಿಂದಿನ ನೀತಿಯು ರಾಷ್ಟ್ರೀಯ ಗ್ರಿಡ್ ಗೆ ಸಂಪರ್ಕ ಹೊಂದದೆ, ಸ್ಥಳೀಯ ಬಳಕೆಗಾಗಿ ಒಂದು ಮೆಗಾ ವ್ಯಾಟ್ ವಿದ್ಯುತ್ ವರೆಗೆ ಉತ್ಪಾದಿಸಲು ಸ್ಥಳೀಯ ಸಮುದಾಯಗಳಿಗೆ ರಿಯಾಯಿತಿ ನೀಡಿತ್ತು. ಇದಲ್ಲದೆ ತೀವ್ರ ಬರಗಾಲದ ಸಂದರ್ಭದಲ್ಲಿ ನೀರು ಜಲ ವಿದ್ಯುತ್ ಘಟಕವನ್ನು ಹಾದು ಹೋಗುವಾಗ, ಕನಿಷ್ಠ ಪಕ್ಷ ಶೇ. 50ರಷ್ಟು ನೈಸರ್ಗಿಕ ನೀರಿನ ಹರಿವನ್ನು ನದಿಯಲ್ಲಿ ಕಾಪಾಡಿಕೊಳ್ಳುವುದೂ ಅಗತ್ಯವಾಗಿತ್ತು.

ಆದರೆ, ನೂತನ ನೀತಿಯು ಸಂಪೂರ್ಣವಾಗಿ ರಾಷ್ಟ್ರೀಯ ಉದ್ಯಾನವನದಲ್ಲಾಗಲಿ ಅಥವಾ ಸಂರಕ್ಷಿತ ಪ್ರದೇಶದಲ್ಲಾಗಲಿ ಯಾವುದೇ ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನು ಅಭಿವೃದ್ಧಿಪಡಿಸಬಲ್ಲ ಸಾಧ್ಯತೆಗೆ ಅವಕಾಶ ಒದಗಿಸುತ್ತದೆ. ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ವಿಶ್ವಸನೀಯ ಮೂಲಗಳ ಪ್ರಕಾರ, ಹೊಸ ನೀತಿಯು ಜಲ ವಿದ್ಯುತ್ ಯೋಜನೆಯ ಕಂಪನಿಗಳು ಜಮೀನನನ್ನು ಖರೀದಿಸಲು ಹಾಗೂ ಕಟಾವಿಗೊಳಗಾಗುವ ಮರಗಳ ಬದಲಿಗೆ ಸಸಿಗಳನ್ನು ನೆಡಲು ತಾವೇ ವೆಚ್ಚ ಮಾಡಬೇಕಿರುವುದರಿಂದ, ಈ ನೀತಿಯು ಪರೋಕ್ಷವಾಗಿ ಸಂರಕ್ಷಿತ ಪ್ರದೇಶಗಳಲ್ಲಿನ ಜಮೀನುಗಳ ಖರೀದಿ ಹಾಗೂ ಮಾರಾಟವನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತಾರೆ.

ಹೊಸ ನೀತಿಯ ಪ್ರಕಾರ, ಸಂಪೂರ್ಣ ಸಂರಕ್ಷಿತ ಪ್ರದೇಶದಲ್ಲಿರುವ 100 ಮೆಗಾ ವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಗಳು ತೀವ್ರ ಬರಗಾಲದ ಪರಿಸ್ಥಿತಿಯಲ್ಲಿ ಕೇವಲ ಶೇ. 10ರಷ್ಟು ಮಾತ್ರ ನೀರನ್ನು ನದಿಗೆ ಹರಿಸಬೇಕಿದೆ. ಈ ಪ್ರಮಾಣದ ನೀರು ತಳ ಮಟ್ಟದಲ್ಲಿರುವ ಜಲಚರಗಳಿಗೆ ಸಾಕಾಗುವಷ್ಟಾಗಲಾರದು ಎನ್ನುತ್ತಾರೆ ತಜ್ಞರು.

ಕರಡು ದಾಖಲೆಯ ಬಗ್ಗೆ ಬಂದಿರುವ ಅಭಿಪ್ರಾಯಗಳನ್ನೆಲ್ಲ ಹೊಸ ವಿಧಾನಗಳೊಂದಿಗೆ ಅಳವಡಿಸಿಕೊಂಡಿಲ್ಲ ಎಂದು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಸಂರಕ್ಷಣಾ ಇಲಾಖೆಯ ವಕ್ತಾರ ಅಜಯ್ ಕರ್ಕಿ ಒಪ್ಪಿಕೊಳ್ಳುತ್ತಾರೆ. ಇಂತಹ ವಿಷಯಗಳ ಕುರಿತು ಉನ್ನತ ಪ್ರಾಧಿಕಾರಗಳ ಮಾತೇ ಅಂತಿಮ ಎಂದು ಅವರು ಹೇಳುತ್ತಾರೆ.

ಸೌಜನ್ಯ: scroll.in

ಮೂಲ ವರದಿ: Mongabay

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News