×
Ad

ಕೇರಳ | ಕಾಡು ಹಂದಿಯ ದಾಳಿಗೆ ರೈತ ಮೃತ್ಯು

Update: 2025-03-02 14:38 IST

Photo : PTI file

ಕಣ್ಣೂರು: ಕಾಡು ಹಂದಿಯ ದಾಳಿಗೆ 70 ವರ್ಷದ ರೈತರೊಬ್ಬರು ಮೃತಪಟ್ಟಿರುವ ಘಟನೆ ರವಿವಾರ ಬೆಳಗ್ಗೆ ಕಣ್ಣೂರು ಬಳಿಯ ಪನೂರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಶ್ರೀಧರನ್ ಎಂದು ಗುರುತಿಸಲಾಗಿದ್ದು, ಬೆಳಗ್ಗೆ ಸುಮಾರು 8 ಗಂಟೆಗೆ ತಮ್ಮ ಹೊಲಕ್ಕೆ ಭೇಟಿ ನೀಡಲು ತೆರಳಿದ್ದಾಗ ಈ ಘಟನೆ ನಡೆದಿದೆ.

ಶ್ರೀಧರನ್ ಅವರ ಕಿರುಚಾಟವನ್ನು ಕೇಳಿದ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಅವರ ಮೇಲೆ ಕಾಡು ಹಂದಿ ದಾಳಿ ನಡೆಸುತ್ತಿರುವುದನ್ನು ಕಂಡಿದ್ದಾರೆ. ಶ್ರೀಧರನ್ ರನ್ನು ರಕ್ಷಿಸುವ ಸ್ಥಳೀಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಕುರಿತು ತಕ್ಷಣವೇ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಈ ಪ್ರದೇಶದಲ್ಲಿ ಗಂಭೀರ ಸ್ವರೂಪದ ವನ್ಯಜೀವಿ ದಾಳಿ ಬೆದರಿಕೆಗಳು ವರದಿಯಾಗಿರಲಿಲ್ಲ. ಹೀಗಾಗಿ, ಅರಣ್ಯ ಇಲಾಖೆ ಪಟ್ಟಿ ಮಾಡಿದ್ದ ಅಪಾಯಕಾರಿ ಸ್ಥಳಗಳ ಪೈಕಿ ಈ ಪ್ರದೇಶವನ್ನು ಗುರುತಿಸಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ಅರಣ್ಯ ಹಾಗೂ ಪಂಚಾಯತಿ ಅಧಿಕಾರಿಗಳ ಕಡೆಯಿಂದ ಏನಾದರೂ ಲೋಪವಾಗಿದೆಯೆ ಎಂಬ ಕುರಿತು ಪ್ರಾಧಿಕಾರಗಳು ಪರಿಶೀಲನೆ ನಡೆಸಲಿವೆ ಎಂದೂ ಅವರು ಹೇಳಿದ್ದಾರೆ.

“ಕಾಡು ಹಂದಿಗಳನ್ನು ಹತ್ಯೆಗೈಯ್ಯಲು ಈಗಾಗಲೇ ಪಂಚಾಯತಿಗಳಿಗೆ ಅನುಮತಿ ನೀಡಲಾಗಿದೆ. ಒಂದು ವೇಳೆ ಅವರು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದರೆ, ಅವರ ಈ ನಿಷ್ಕ್ರಿಯತೆಯನ್ನು ತನಿಖೆಗೊಳಪಡಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರಾಥಮಿಕ ವಿಚಾರಣೆ ಪ್ರಗತಿಯಲ್ಲಿದ್ದು, ಈ ಪ್ರಕರಣದ ಕುರಿತು ಇನ್ನಷ್ಟೇ ಎಫ್ಐಆರ್ ದಾಖಲಾಗಬೇಕಿದೆ ಎಂದು ಕತಿರೂರ್ ಠಾಣೆಯ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News