×
Ad

ಉತ್ತರ ಪ್ರದೇಶ | ಮೇಜಿನ ಮೇಲೆ ಕಾಲಿಟ್ಟು ಎಸಿಯ ಮುಂದೆ ನಿದ್ದೆಗೆ ಜಾರಿದ ವೈದ್ಯ; ತುರ್ತು ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು

Update: 2025-07-29 17:12 IST

Screengrab:X/@Juhityagi17

ಮೀರತ್ (ಉತ್ತರ ಪ್ರದೇಶ): ಇಲ್ಲಿನ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ಸಮಯದಲ್ಲಿ ವೈದ್ಯರು ನಿದ್ರಿಸಿದ್ದರಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆನ್ನಲಾದ ಘಟನೆ ವರದಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸುನಿಲ್ ಎಂಬವರು ಸೋಮವಾರ ಸಂಜೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಅವರನ್ನು ತಕ್ಷಣವೇ ಲಾಲಾ ಲಜಪತ್ ರಾಯ್ ಸ್ಮಾರಕ (LLRM) ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಆದರೆ, ಸ್ಟ್ರೆಚರ್ ಮೇಲೆ ಅಪಘಾತಕ್ಕೀಡಾದ ವ್ಯಕ್ತಿಯು ಅಳುತ್ತಿದ್ದರೂ, ಕರ್ತವ್ಯದಲ್ಲಿದ್ದ ಇಬ್ಬರು ಕಿರಿಯ ವೈದ್ಯರಾದ ಭೂಪೇಶ್ ಕುಮಾರ್ ರಾಯ್ ಮತ್ತು ಅನಿಕೇತ್, ಮುಂದೆ ಮೇಜಿನ ಮೇಲೆ ಕಾಲು ಹಾಕಿ ನಿದ್ದೆಗೆ ಜಾರಿದ್ದರು ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ, ವೈದ್ಯರಲ್ಲಿ ಒಬ್ಬರು ನಿದ್ರಿಸುತ್ತಿರುವ ದೃಶ್ಯ, ಹಾಗೂ ಮಗುವನ್ನು ಹೊತ್ತುಕೊಂಡು ಚೀಟಿ ಹಿಡಿದು ಸಹಾಯ ಕೋರಿ ಕಾದು ನಿಂತ ಮಹಿಳೆಯೊಬ್ಬರು ಅವರನ್ನು ಎಬ್ಬಿಸಲು ಯತ್ನಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಈ ಮಧ್ಯೆ, ಸುನಿಲ್ ಅವರ ಕಾಲಿನಿಂದ ನಿರಂತರವಾಗಿ ರಕ್ತ ಹರಿಯುತ್ತಿರುವುದೂ ದೃಶ್ಯದಲ್ಲಿ ಸೆರೆಯಾಗಿದೆ.

ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆ ತಂದಾಗ, ಕರ್ತವ್ಯ ನಿರ್ವಹಿಸುತ್ತಿರುವ ಡಾ. ಶಶಾಂಕ್ ಜಿಂದಾಲ್ ಅವರು ಅಲ್ಲಿರಲಿಲ್ಲ. ಆದರೆ ಕುಟುಂಬ ವರ್ಗದವರಿಂದ ನಿರ್ಲಕ್ಷ್ಯದ ಕುರಿತು ದೂರು ಬಂದ ತಕ್ಷಣ ಅವರು ಆಸ್ಪತ್ರೆಗೆ ಬಂದು ಇಂಟ್ರಾವೆನಸ್ ದ್ರವ ಹಾಗೂ ಕ್ಯಾಸ್ಟ್ ಸಹಿತ ತುರ್ತು ಚಿಕಿತ್ಸೆ ನೀಡಿದರು. ಚಿಕಿತ್ಸೆ ವಿಳಂಬವಾದ ಕಾರಣ ಸುನಿಲ್ ಅವರು ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೊನೆಯುಸಿರೆಳೆದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಆದರೆ ರೋಗಿ ಮೊದಲಿನಿಂದಲೂ ಗಂಭೀರ ಸ್ಥಿತಿಯಲ್ಲಿದ್ದರು ಎಂದು ಎಂದು ಡಾ. ಜಿಂದಾಲ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಸಿ. ಗುಪ್ತಾ, "ವೈರಲ್ ವೀಡಿಯೊದಲ್ಲಿ ರೋಗಿಯು ಸಹಾಯ ಕೇಳುತ್ತಿರುವಾಗ ಇಬ್ಬರು ವೈದ್ಯರು ನಿದ್ರಿಸುತ್ತಿರುವುದು ಕಂಡು ಬಂದಿದೆ. ಅವರಿಬ್ಬರನ್ನೂ ತಕ್ಷಣ ಅಮಾನತು ಮಾಡಲಾಗಿದೆ. ಘಟನೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಮೀರತ್ ಜಿಲ್ಲಾಧಿಕಾರಿ ಕೂಡ ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News