ಅಮೆರಿಕದಿಂದ ಗಡಿಪಾರಾದವರನ್ನು ಹೊತ್ತ ಮುಂದಿನ ವಿಮಾನ ಪಂಜಾಬ್‌ನಲ್ಲಿ ಇಳಿಯದಿರಬಹುದು: ಸಿಎಂ ಭಗವಂತ್ ಮಾನ್
PC: PTI
ಚಂಡೀಗಢ: ಅಮೆರಿಕದಿಂದ ಗಡಿಪಾರಾದವರನ್ನು ಹೊತ್ತ ಮುಂದಿನ ವಿಮಾನ ಪಂಜಾಬ್‌ನಲ್ಲಿ ಇಳಿಯದಿರಬಹುದು ಎಂದು ಪಂಜಾಬ್ ಸಿಎಂ ಮಾನ್ ಹೇಳಿದ್ದಾರೆ.
ಅಮೃತಸರದಲ್ಲಿ ಮೂರು ವಲಸಿಗರ ವಿಮಾನಗಳ ಲ್ಯಾಂಡಿಂಗ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಆ ವಿಮಾನ ರಾಜ್ಯದಲ್ಲಿ ಇಳಿಯದಿರಬಹುದು ಎಂದು ಅವರು ಆಶಿಸಿದ್ದಾರೆ
ಸರ್ದುಲ್‌ಗಢದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಗಡಿಪಾರು ಮಾಡಲಾದವರನ್ನು ಹೊತ್ತ ಅಮೆರಿಕದ ವಿಮಾನಗಳ ಲ್ಯಾಂಡಿಂಗ್ ಬಗ್ಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದೇನೆ" ಎಂದು ಅಕ್ರಮ ಭಾರತೀಯ ವಲಸಿಗರನ್ನು ಕರೆತರುವ ವಿಮಾನ ಅಮೃತಸರ ವಿಮಾನ ನಿಲ್ದಾಣದಲ್ಲಿ ಏಕೆ ಇಳಿಯಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರು.
"ಇನ್ನೊಂದು ವಿಮಾನ ಬಂದರೆ, ಅದು ಕನಿಷ್ಠ ಅಮೃತಸರದಲ್ಲಿ ಅಥವಾ ಪಂಜಾಬ್‌ನಲ್ಲಿ ಇಳಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕೇಂದ್ರವು ಪಂಜಾಬ್‌ಗೆ ಮಾನಹಾನಿ ಮಾಡಲು ಪಿತೂರಿ ನಡೆಸುತ್ತಿದೆ", ಎಂದು ಅವರು ಆರೋಪಿಸಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ, ಪಂಜಾಬ್ ಸಿಎಂ ಮಾನ್, ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಗಡಿಪಾರು ಮಾಡಲಾದವರನ್ನು ಕರೆತರುವ ಅಮೆರಿಕದ ಮೂರು ಮಿಲಿಟರಿ ವಿಮಾನಗಳನ್ನು ಅಮೃತಸರದಲ್ಲಿ ಇಳಿಸಲು ಅನುಮತಿಸಿದ್ದ ಕ್ರಮವನ್ನು ಪ್ರಶ್ನಿಸಿದ್ದರು.
ಕೇಂದ್ರದ ನಡೆಯನ್ನು ಖಂಡಿಸುತ್ತಾ, ಪವಿತ್ರ ನಗರವನ್ನು ಗಡಿಪಾರು ಕೇಂದ್ರವನ್ನಾಗಿ ಮಾಡಬೇಡಿ ಎಂದು ಮಾನ್ ಹೇಳಿದ್ದರು. ದಿಲ್ಲಿಯಂತಹಾ ಇತರ ವಿಮಾನ ನಿಲ್ದಾಣಗಳಲ್ಲಿ ಈ ವಿಮಾನಗಳನ್ನು ಇಳಿಸಲು ಸರ್ಕಾರ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.
ಗಡಿಪಾರು ಮಾಡುವುದು ರಾಷ್ಟ್ರೀಯ ಸಮಸ್ಯೆ. ಆದರೆ ಪಂಜಾಬಿಗಳು ಮಾತ್ರ ಅಕ್ರಮವಾಗಿ ವಲಸೆ ಹೋಗುತ್ತಿದ್ದಾರೆ ಎಂದು ಬಿಂಬಿಸುವಂತೆ ಮಾಡಲಾಗುತ್ತಿದೆ ಎಂದು ಸಿಎಂ ಮಾನ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ ಪಂಜಾಬ್, ಹರಿಯಾಣ, ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳಿಂದ ಬಂದಿರುವ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಮೂರು ಅಮೇರಿಕದ ವಿಮಾನಗಳು ಫೆಬ್ರವರಿ 5, ಫೆಬ್ರವರಿ 15 ಮತ್ತು ಫೆಬ್ರವರಿ 16 ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದವು.
ಗಡಿಪಾರು ಮಾಡಿದವರ ಕುರಿತಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮಾನ್, "ನಾವು ವಾಪಾಸ್ಸಾದ ವಲಸಿಗರಿಗೆ ಅವಕಾಶಗಳನ್ನು ನೀಡುತ್ತೇವೆ. ಅವರಲ್ಲಿ ಯಾರಾದರೂ ಪಟ್ವಾರಿ, ಪೊಲೀಸ್ ಉಪ ಸೂಪರಿಂಟೆಂಡೆಂಟ್ ಅಥವಾ ಉಪ-ವಿಭಾಗೀಯ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ, ಅವರಿಗೆ ಉದ್ಯೋಗಗಳನ್ನು ನೀಡಲಾಗುವುದು. ನಾವು ಅವರನ್ನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಲು ಬಿಡುವುದಿಲ್ಲ" ಎಂದು ಹೇಳಿದರು.