×
Ad

ಬಿಜೆಪಿಯಿಂದಲೇ ಮುಂದಿನ ಉಪರಾಷ್ಟ್ರಪತಿ ಆಯ್ಕೆ: ಪಕ್ಷದ ತತ್ವ ಸಿದ್ಧಾಂತಕ್ಕೆ ನಿಕಟ ನಿಲುವು ಹೊಂದಿರುವ ನಾಯಕರಿಗೆ ಆದ್ಯತೆ ; ವರದಿ

Update: 2025-07-24 11:03 IST

ಜಗದೀಪ್ ಧನ್ಕರ್ (PTI)

ಹೊಸದಿಲ್ಲಿ: ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅನುಭವಿ, ಹಿರಿಯ ನಾಯಕನೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ದಿಢೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರಮುಖ ಹುದ್ದೆ ಖಾಲಿಯಾಗಿದೆ. ಧನ್ಕರ್ ಅವರ ರಾಜೀನಾಮೆಯ ನಂತರ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಪರಿಗಣಿಸಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ತೀವ್ರವಾಗಿದ್ದರೂ, ಬಿಜೆಪಿ ಮೂಲಗಳು ಈ ವದಂತಿಗಳನ್ನು ತಳ್ಳಿಹಾಕಿವೆ. "ಉಪರಾಷ್ಟ್ರಪತಿಯಾಗಲಿರುವವರು ಪಕ್ಷದ ತತ್ವಗಳು ಮತ್ತು ಸಿದ್ಧಾಂತಗಳಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿ ಆಗಿರುತ್ತಾರೆ", ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಜೆಡಿಯು ನಾಯಕ ರಾಮ್ ನಾಥ್ ಠಾಕೂರ್ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನಡುವಿನ ಸಭೆಯು ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆದರೆ ಪಕ್ಷದ ಮೂಲಗಳ ಪ್ರಕಾರ, ಉಪರಾಷ್ಟ್ರಪತಿ ಹುದ್ದೆ ಕುರಿತಂತೆ ಜೆಡಿಯು ಜೊತೆ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ ಎನ್ನಲಾಗಿದೆ.

ಇದರೊಂದಿಗೆ ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಆರಂಭಿಸಿದ್ದು, ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆಯೋಗದ ಪ್ರಕಾರ, ಮಾತದಾರರ ಪಟ್ಟಿ ಸಿದ್ಧಪಡಿಸುವುದು, ಚುನಾವಣಾಧಿಕಾರಿಗಳನ್ನು ನೇಮಿಸುವುದು ಮತ್ತು ಹಿಂದಿನ ಚುನಾವಣಾ ದಾಖಲೆಗಳನ್ನು ಪರಿಶೀಲಿಸುವುದು ಆದ್ಯತೆಯ ಮೇಲೆ ನಡೆಯಲಿದೆ.

ವಿರೋಧ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಇತಿಹಾಸದಲ್ಲಿ 16 ಉಪರಾಷ್ಟ್ರಪತಿ ಚುನಾವಣೆಗಳ ಪೈಕಿ ಕೇವಲ ನಾಲ್ಕು ಮಾತ್ರ ಅವಿರೋಧವಾಗಿರುವುದರಿಂದ, ಈ ಬಾರಿಯೂ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಧನ್ಕರ್ ಅವರ ರಾಜೀನಾಮೆಗೆ ಕಾರಣವಾಗಿ ಹಲವು ಅಂಶಗಳನ್ನು ಉಲ್ಲೇಖಿಸಲಾಗುತ್ತಿದ್ದು, ಕೆಲ ವರದಿಗಳ ಪ್ರಕಾರ, ಅವರು ಕೆಲವೊಮ್ಮೆ ಪಕ್ಷದ ನಿಲುವಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿದರೆಂಬ ಅಸಮಾಧಾನ ಪಕ್ಷದೊಳಗೆ ಇತ್ತು. ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ನಿರ್ಣಯವನ್ನು ಅಂಗೀಕರಿಸುವುದು ಹಾಗೂ ಕೃಷಿ ನೀತಿಗಳ ಕುರಿತಂತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಾರ್ವಜನಿಕವಾಗಿ ಕೇಳಿದ್ದ ಪ್ರಶ್ನೆಗಳು ಸರಕಾರದ ಅಸಮಾಧಾನಕ್ಕೆ ಕಾರಣವಾಗಿದ್ದವು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಸಮಾಧಾನ ಎಲ್ಲಿವರೆಗೆ ತಲುಪಿತ್ತು ಎಂದರೆ, ಒಂದು ವೇಳೆ ಧನ್ಕರ್ ಅವರು ರಾಜೀನಾಮೆ ನೀಡದೇ ಇದ್ದರೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಯೋಜನೆಯು ಇತ್ತು ಎನ್ನಲಾಗಿದೆ.

ಅವರ ರಾಜೀನಾಮೆಯ ಬಳಿಕ, ಮುಂದಿನ ಉಪರಾಷ್ಟ್ರಪತಿ ಆಯ್ಕೆ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಪಕ್ಷವು ತನ್ನ ತತ್ವಗಳಿಗೆ ಬದ್ಧರಾಗಿರುವ, ವಿಶ್ವಾಸಾರ್ಹ ಹಾಗೂ ರಾಜಕೀಯವಾಗಿ ಅನುಭವ ಹೊಂದಿರುವ ವ್ಯಕ್ತಿಯನ್ನೇ ಈ ಹುದ್ದೆಗೆ ಮುಂದಿರಿಸಲು ಉದ್ದೇಶಿಸಿರುವುದು ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News