ಮಹಾಕುಂಭ ಮೇಳ | ಅಸಮರ್ಪಕ ನೈರ್ಮಲ್ಯ ಸೌಲಭ್ಯಗಳ ಬಗ್ಗೆ ಉತ್ತರ ಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಕೋರಿದ ಹಸಿರು ನ್ಯಾಯಮಂಡಳಿ
Photo | PTI
ಲಕ್ನೋ : ಮಹಾಕುಂಭ ಮೇಳದಲ್ಲಿ ಗಂಗಾ ನದಿಯ ದಡದಲ್ಲಿ ಬಯಲು ಶೌಚ ಮತ್ತು ಅಸಮರ್ಪಕ ನೈರ್ಮಲ್ಯ ಸೌಲಭ್ಯಗಳ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಉತ್ತರ ಪ್ರದೇಶ ಸರಕಾರ, ಪ್ರಯಾಗ್‌ರಾಜ್ ಕುಂಭ ಮೇಳ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತಿಕ್ರಿಯೆ ಕೋರಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಬಯಲು ಶೌಚಕ್ಕೆ ಕಾರಣವಾದ ಶೌಚಾಲಯದ ಸೂಕ್ತ ನಿರ್ವಹಣೆ ಕೊರತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ(NGT) ದೂರು ನೀಡಲಾಗಿತ್ತು. ಇದರಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಉತ್ತರಪ್ರದೇಶ ಸರಕಾರದಿಂದ ಪ್ರತಿಕ್ರಿಯೆಯನ್ನು ಕೋರಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸತತ ಎರಡು ವಾರಗಳ ಕಾಲ ಗಂಗಾ ಮತ್ತು ಯಮುನಾ ನದಿಗಳ ನೀರಿನ ಗುಣಮಟ್ಟವನ್ನು ಪರಿಶೀಲಿಸಿತ್ತು. ಮಹಾಕುಂಭದಲ್ಲಿ ಗಂಗಾ ಮತ್ತು ಯಮುನಾ ನೀರಿನ ಗುಣಮಟ್ಟವು ಹೆಚ್ಚಿನ ಮಟ್ಟದ ಪ್ರಾಣಿಗಳ ಮಲದಲ್ಲಿರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೊಂದಿದ್ದು, ಸ್ನಾನಕ್ಕೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಈ ಮೊದಲು ತಿಳಿಸಿತ್ತು.