×
Ad

ಮೂವರು ಮ್ಯಾನ್ಮಾರ್ ಪ್ರಜೆಗಳ ವಿರುದ್ಧ ಎನ್ ಐ ಎ ಚಾರ್ಜ್ ಶೀಟ್

Update: 2024-02-04 16:49 IST

ಹೊಸದಿಲ್ಲಿ : ಭಾರತ-ಬಾಂಗ್ಲಾದೇಶದ ಗಡಿಯುದ್ದಕ್ಕೂ ವಿದೇಶಿ ಪ್ರಜೆಗಳ ಅಕ್ರಮ ಒಳನುಸುಳುವಿಕೆ ಮತ್ತು ಪ್ರಮುಖ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ರವಿವಾರ ಮೂವರು ಮ್ಯಾನ್ಮಾರ್ ಪ್ರಜೆಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ರೊಹಿಂಗ್ಯಾ ಪ್ರಜೆಗಳ ಒಳನುಸುಳುವಿಕೆ ಪ್ರಕರಣವೂ ಇದರಲ್ಲಿ ಸೇರಿದೆ ಎಂದು ndtv ವರದಿ ಮಾಡಿದೆ.

ರೋಹಿಂಗ್ಯಾ ಮೂಲದ ಆರೋಪಿಗಳನ್ನು ರಬಿಯುಲ್ ಇಸ್ಲಾಂ, ಸೋಫಿ ಅಲೋಮ್ ಮತ್ತು ಮುಹಮ್ಮದ್ ಉಸ್ಮಾನ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮ್ಯಾನ್ಮಾರ್‌ನ ಮೌಂಗ್‌ಡಾವ್ ಜಿಲ್ಲೆಯ ಖಾಯಂ ನಿವಾಸಿಗಳು ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.

ಆರೋಪಿಗಳು ಮಾನವ ಕಳ್ಳಸಾಗಣಿಕೆದಾರರು ಮತ್ತು ದಲ್ಲಾಳಿಗಳೊಂದಿಗೆ ಶಾಮೀಲಾಗಿ ಪ್ರಯಾಣದ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ ಎಂದು ಎನ್‌ಐಎ ಹೇಳಿದೆ. ಭಾರತಕ್ಕೆ ನುಸುಳಲು ಮತ್ತು ಅನಧಿಕೃತ ಮತ್ತು ಅಕ್ರಮ ಗಡಿ ಮಾರ್ಗಗಳನ್ನು ಬಳಸಲು ಹಲವಾರು ವಿದೇಶಿ ಪ್ರಜೆಗಳಿಗೆ ಸಹಾಯ ಮಾಡುವಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು ಎಂದು ಎನ್ಐಎ ಚಾರ್ಜ್ಶೀಟ್ ನಲ್ಲಿ ತಿಳಿಸಿದೆ.

ಪ್ರಕತಣವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಕಳ್ಳಸಾಗಣೆದಾರರು ಮತ್ತು ಕಳ್ಳರ ಸುಸಂಘಟಿತ ಜಾಲದ ಒಂದು ಭಾಗವಾಗಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ದುರ್ಬಲ ರೋಹಿಂಗ್ಯಾ ಮಹಿಳೆಯರನ್ನು ರೊಹಿಂಗ್ಯಾ ಪುರುಷರಿಗೆ ಮದುವೆ ಮಾಡಿಸುವುದಾಗಿ ಸುಳ್ಳು ಭರವಸೆ ನೀಡಿ ಅಕ್ರಮ ಮಾನವ ಕಳ್ಳಸಾಗಣಿಕೆ ಮೂಲಕ ಭಾರತಕ್ಕೆ ಕರೆತರುವಲ್ಲಿ ಆರೋಪಿಗಳು ತೊಡಗಿದ್ದರು ಎಂದು ಎನ್‌ಐಎ ತಿಳಿಸಿದೆ.

ಭಾರತಕ್ಕೆ ಕರೆತಂದ ನಂತರ ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಬಲವಂತದ ಮದುವೆಗೆ ಮಹಿಳೆಯರನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಎನ್‌ಐಎ ತಿಳಿಸಿದೆ.

ಆರೋಪಿಗಳಾದ ರಬಿ ಇಸ್ಲಾಂ ಮತ್ತು ಮುಹಮ್ಮದ್ ಉಸ್ಮಾನ್, ತಮ್ಮ ನೈಜ ಗುರುತು ಮರೆಮಾಚಿ ಅಕ್ರಮ ಮಾರ್ಗದಲ್ಲಿ ಆಧಾರ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಅದನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ, ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಎನ್‌ಐಎ ತನಿಖೆ ಬಹಿರಂಗಪಡಿಸಿದೆ. ನವೆಂಬರ್ 7, 2023 ರಿಂದ ಪ್ರಕರಣದ ತನಿಖೆಯನ್ನು ಆರಂಭಿಸಿದ NIA, ಪ್ರಮುಖ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚುವ ಮತ್ತು ಕಿತ್ತುಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News