×
Ad

10 ದಿನಗಳ ಕಾಲ ಕಸಾಯಿಖಾನೆ ಮುಚ್ಚಲು ಬಾಂಬೆ ಹೈಕೋರ್ಟ್ ನಿರಾಕರಣೆ

2 ದಿನದ ಬದಲು 10 ದಿನವೂ ಮುಚ್ಚುವಂತೆ ಕೋರಿದ್ದ ಜೈನ ಸಮುದಾಯದ ಮನವಿ ತಿರಸ್ಕೃತ

Update: 2025-08-20 21:26 IST

 ಬಾಂಬೆ ಹೈಕೋರ್ಟ್ | PTI 

ಮುಂಬೈ: ಮುಂಬೈ ನಗರದಲ್ಲಿ 10 ದಿನಗಳ ಕಾಲ ನಡೆಯಲಿರುವ ಪರ್ಯೂಶನ್ ಪರ್ವ್ ಹಬ್ಬದ ಅವಧಿಯಲ್ಲಿ ಕಸಾಯಿಖಾನೆ ಮುಚ್ಚಲು ಆದೇಶಿಸುವಂತೆ ಕೋರಿ ಜೈನ ಸಮುದಾಯ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಅಲೋಕ್ ಆರಾಧೆ ಹಾಗೂ ನ್ಯಾ. ಸಂದೀಪ್ ಮಾರ್ನೆ ಅವರನ್ನೊಳಗೊಂಡ ನ್ಯಾಯಪೀಠ, ಜೈನ ಸಮುದಾಯದ ಧಾರ್ಮಿಕ ಭಾವನೆಗಳ ಬಗ್ಗೆ ಗೌರವವಿದ್ದರೂ, ಕಸಾಯಿಖಾನೆಗಳನ್ನು 10 ದಿನಗಳ ಕಾಲ ಮುಚ್ಚುವಂತೆ ಕೋರುವ ಹಕ್ಕು ಅದಕ್ಕೆ ಎಲ್ಲಿಂದ ಬಂದಿತು ಎಂದು ಪ್ರಶ್ನಿಸಿತು.

ಪರ್ಯುಶನ್ ಪರ್ವ್ ಹಬ್ಬದ ವೇಳೆ ಎರಡು ದಿನಗಳ ಕಾಲ ಮಾತ್ರ ಕಸಾಯಿಖಾನೆಗಳನ್ನು ಮುಚ್ಚಬೇಕು ಎಂಬ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಆದೇಶವನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.

ನಗರದಲ್ಲಿ ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇರುವುದರಿಂದ, ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಮುಖ್ಯಸ್ಥರು ಕಾರಣ ನೀಡಿದ್ದರು.

ಆಗಸ್ಟ್ 20ರಿಂದ 27ವರೆಗೆ ಹಾಗೂ ಆಗಸ್ಟ್ 21ರಿಂದ 28ರವರೆಗೆ ಕ್ರಮವಾಗಿ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮುದಾಯಗಳಿಂದ ಪರ್ಯುಶನ್ ಪರ್ವ್ ಹಬ್ಬವನ್ನು ಆಚರಿಸಲಾಗುತ್ತದೆ.

“ನಾವು ನಿಮ್ಮ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ, 10 ದಿನಗಳ ಕಾಲ ಕಸಾಯಿಖಾನೆಗಳನ್ನು ಮುಚ್ಚಬೇಕು ಎಂಬ ಹಕ್ಕು ನಿಮಗೆಲ್ಲಿಂದ ಬಂತು ಎಂಬುದನ್ನು ತಿಳಿಸಿ” ಎಂದು ಪ್ರಶ್ನಿನಸಿದ ನ್ಯಾಯಾಲಯ, ಈ ಕುರಿತು ಯಾವುದೇ ಆದೇಶ ಹೊರಡಿಸಲು ನಿರಾಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News