"ಪಹಲ್ಗಾಮ್ ದಾಳಿಯಲ್ಲಿ ತನ್ನ ಪಾತ್ರವಿಲ್ಲ’’: ‘ದಿ ರೆಸಿಸ್ಟೆನ್ಸ್ ಫ್ರಂಟ್’ ಯು ಟರ್ನ್
PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಪ್ರತಿಪಾದಿಸಿದೆ.
ಪಾಕಿಸ್ತಾನದ ಮೂಲದ ನಿಷೇಧಿತ ಸಂಘಟನೆ ಲಷ್ಕರೆ ತಯ್ಯಿಬ (ಎಲ್‌ಇಟಿ)ದ ಅಂಗ ಸಂಘಟನೆಯಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಆನ್‌ಲೈನ್ ನಲ್ಲಿ ಹೇಳಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಹಿಂದೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಪಾಕಿಸ್ತಾನದ ಒತ್ತಡದ ಬಳಿಕ ಹಾಗೂ ದಾಳಿಯ ವಿರುದ್ಧ ಕಣಿವೆಯಾದ್ಯಂತ ಕಾಶ್ಮೀರಿಗಳಿಂದ ಸಾಮೂಹಿಕ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ದಾಳಿಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ ಎಂದು ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ವೆಬ್‌ಸೈಟ್ ನ ಹೇಳಿಕೆಯಲ್ಲಿ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್), ‘‘ಪರಮ ದಯಾಳುವು, ಕರುಣಾಮಯಿಯೂ ಆದ ಅಲ್ಲಾಹ್ ನ ಹೆಸರಿನಲ್ಲಿ. ಪಹಲ್ಗಾಮ್ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿರುವುದನ್ನು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸ್ಪಷ್ಟವಾಗಿ ನಿರಾಕರಿಸುತ್ತದೆ. ಈ ಕೃತ್ಯವನ್ನು ಟಿಆರ್‌ಎಫ್ ಮಾಡಿದೆ ಎಂಬ ಯಾವುದೇ ಆರೋಪ ಸುಳ್ಳು ಹಾಗೂ ಕಾಶ್ಮೀರಿಗಳ ಪ್ರತಿರೋಧವನ್ನು ಕೆಣಕಲು ಆಯೋಜಿಸಲಾದ ಅಭಿಯಾನದ ಭಾಗವಾಗಿದೆ’’ ಎಂದು ಹೇಳಿದೆ.
ತಮ್ಮ ಡಿಜಿಟಲ್ ವೇದಿಕೆಯೊಂದರಲ್ಲಿ ಪಹಲ್ಗಾಮ್ ದಾಳಿಯ ಬಳಿಕ ಹೊಣೆ ಹೊತ್ತುಕೊಂಡು ಅನಧಿಕೃತ ಸಂದೇಶ ಪೋಸ್ಟ್ ಆಗಿದೆ ಎಂದು ಅದು ಹೇಳಿದೆ.
‘‘ಆಂತರಿಕ ಪರಿಶೀಲನೆಯ ಬಳಿಕ, ಇದು ಸಂಘಟಿತ ಅಪರಾಧದ ಪರಿಣಾಮ ಎಂದು ನಮಗೆ ತಿಳಿದು ಬಂದಿದೆ. ಈ ಅನಧಿಕೃತ ಪೋಸ್ಟ್ ಆಗಿರುವುದನ್ನು ಪತ್ತೆ ಹಚ್ಚಲು ನಾವು ತನಿಖೆ ನಡೆಸುತ್ತಿದ್ದೇವೆ. ಆರಂಭಿಕ ತನಿಖೆಯಲ್ಲಿ ಇದು ಭಾರತೀಯ ಸೈಬರ್ ಇಂಟಲಿಜೆನ್ಸ್ ಕಾರ್ಯಕರ್ತರ ಕೈವಾಡವನ್ನು ಸೂಚಿಸುತ್ತದೆ’’ ಎಂದು ಸಂಘಟನೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಆರಂಭದಲ್ಲಿ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್)ಹೊತ್ತುಕೊಂಡ ಬಳಿಕ ಕಣಿವೆಯಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿತು. ಸ್ಥಳೀಯರು ಪಾಕಿಸ್ತಾನ ಹಾಗೂ ಅದು ಬೆಂಬಲಿಸುತ್ತಿರುವ ಭಯೋತ್ಪಾದಕ ಗುಂಪುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.