ಯಾವ ಕಂಬಿಯೂ ನನ್ನನ್ನು ಬಂಧನದಲ್ಲಿಡಲು ಸಾಧ್ಯವಿಲ್ಲ: ಈಡಿ ಕಸ್ಟಡಿಯಿಂದ ಕೇಜ್ರಿವಾಲ್ ಸಂದೇಶ
ಅರವಿಂದ್ ಕೇಜ್ರಿವಾಲ್ | Photo: PTI
"ಬಿಜೆಪಿಯವರನ್ನು ದ್ವೇಷಿಸಬೇಡಿ, ಅವರೆಲ್ಲರೂ ನಮ್ಮ ಸಹೋದರರು ಮತ್ತು ಸಹೋದರಿಯರು"ಹೊಸದಿಲ್ಲಿ: ನನ್ನ ಜೀವನದ ಪ್ರತಿ ಕ್ಷಣವೂ ದೇಶಕ್ಕೆ ಸೇವೆ ಸಲ್ಲಿಸಲು ಮೀಸಲಾಗಿದೆ ಎಂದು ಈಡಿ ಕಸ್ಟಡಿಯಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂದೇಶವೊಂದರಲ್ಲಿ ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಪ್ರಥಮ ಬಾರಿಗೆ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರ ಪತ್ನಿ ಸುನಿತಾ ಕೇಜ್ರಿವಾಲ್, ಈ ಸಂದೇಶವನ್ನು ಓದಿದರು.
ಬಿಜೆಪಿಯವರನ್ನೂ ಸೇರಿದಂತೆ ಯಾರನ್ನೂ ದ್ವೇಷಿಸಬೇಡಿ. ಅವರೆಲ್ಲರೂ ನಮ್ಮ ಸಹೋದರರು ಮತ್ತು ಸಹೋದರಿಯರು. ಸಮಾಜಕ್ಕಾಗಿ ಕೆಲಸ ಮಾಡಿ ಎಂದು ದಿಲ್ಲಿ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಈಡಿ ಕಸ್ಟಡಿಯಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಯಾವ ಕಂಬಿಯೂ ನನ್ನನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ ಹಾಗೂ ನಾನು ಶೀಘ್ರವೇ ವಾಪಸ್ಸು ಬರುತ್ತೇನೆ ಎಂದು ಈಡಿ ಕಸ್ಟಡಿಯಲ್ಲಿರುವ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ತಾನೆಂದೂ ವಿಫಲಗೊಂಡಿಲ್ಲ ಎಂದು ಅಭಯ ನೀಡಿರುವ ಅರವಿಂದ್ ಕೇಜ್ರಿವಾಲ್, ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾಸಿಕ ರೂ. 1,000 ಗೌರವ ಧನ ನೀಡುವ ಯೋಜನೆಯನ್ನು ಜಾರಿಗೊಳಿಸುವುದಾಗಿಯೂ ಭರವಸೆ ನೀಡಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 28ರವರೆಗೆ ಈಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ದಿಲ್ಲಿಯ ಹಾಲಿ ಅಬಕಾರಿ ನೀತಿಯೊಂದಿಗೆ ಸಂಬಂಧ ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಬಂಧಿಸಲಾಗಿತ್ತು.