×
Ad

ನಾಸಿಕ್ ಕುಂಭಮೇಳದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅನುಮತಿ ಬೇಡ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

Update: 2025-11-07 15:49 IST

 ಮಹಾರಾಷ್ಟ್ರಸಚಿವ ನಿತೇಶ್ ರಾಣೆ (File Photo: ANI)

ನಾಸಿಕ್: ನಾಸಿಕ್‌ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ನೀಡಬಾರದು ಎಂದು ಮಹಾರಾಷ್ಟ್ರದ ಸಚಿವ ಹಾಗೂ ಬಿಜೆಪಿ ನಾಯಕ ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ನಾಸಿಕ್-ತ್ರಿಂಬಕೇಶ್ವರ ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 2026ರಲ್ಲಿ ಆರಂಭವಾಗಲಿದೆ. ದೇಶದ ನಾಲ್ಕು ಪ್ರಮುಖ ಕುಂಭಮೇಳಗಳಲ್ಲಿ ಒಂದಾದ ಈ ಧಾರ್ಮಿಕ ಸಮಾವೇಶಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, “ಕುಂಭಮೇಳವು ನಂಬಿಕೆಯ ಹಬ್ಬವಾಗಿದೆ. ಹಿಂದೂ ನಂಬಿಕೆಗಳಲ್ಲಿ ನಂಬಿಕೆಯಿಲ್ಲದವರು ಇದರ ಪ್ರಯೋಜನ ಪಡೆಯಬಾರದು. ಹಿಂದೂಗಳ ಹೆಸರಿನಲ್ಲಿ ಹಿಂದೂಯೇತರರು ಅಂಗಡಿಗಳು ಅಥವಾ ವ್ಯವಹಾರಗಳನ್ನು ಪ್ರಾರಂಭಿಸದಂತೆ ಎಚ್ಚರಿಕೆ ವಹಿಸಬೇಕು,” ಎಂದು ಹೇಳಿದರು ಎಂದು Times of India ವರದಿ ಮಾಡಿದೆ.

ಈ ವಿಷಯವು ಹಿಂದೂ ಸಮುದಾಯದ ಭಾವನೆಗಳಿಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ. “ಈದ್ ಹಬ್ಬ ಬಂದಾಗ ಯಾರೂ ಹಿಂದೂಗಳಿಂದ ಏನನ್ನೂ ಖರೀದಿಸುವುದಿಲ್ಲ. ಅವರು ನಮ್ಮನ್ನು ‘ಕಾಫಿರ್’ ಎಂದು ಪರಿಗಣಿಸುತ್ತಾರೆ. ಹಾಗಾದರೆ, ನಾವು ಅವರ ಹಬ್ಬಗಳಲ್ಲಿ ವ್ಯವಹಾರ ಮಾಡಲು ಅವಕಾಶ ಕೊಡಬೇಕೇ?” ಎಂದು ಅವರು ಪ್ರಶ್ನಿಸಿದ್ದಾರೆ ಎಂದು ANI ವರದಿ ಮಾಡಿದೆ.

ಬಿಜೆಪಿ ನಾಯಕ ರಾಣೆ ಹಿಂದೆಯೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅವರು ಈ ಬಾರಿ ನೀಡಿದ ಹೇಳಿಕೆಯು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಜುಲೈನಲ್ಲಿ ಅವರು, “ಮದರಸಾಗಳಲ್ಲಿ ಮರಾಠಿ ಕಲಿಸಬೇಕು, ಉರ್ದು ಬದಲಿಗೆ ಮರಾಠಿಯಲ್ಲಿ ಆಝಾನ್ ಪಠಿಸಬೇಕು, ಇಲ್ಲದಿದ್ದರೆ ಬಂದೂಕು ಮಾತ್ರ ದೊರೆಯುತ್ತದೆ” ಎಂದು ಹೇಳಿದ್ದರು. ಜೂನ್‌ ನಲ್ಲಿ ಬಕ್ರೀದ್ ಸಂದರ್ಭದಲ್ಲಿ “ಪರಿಸರವಾದಿಗಳು ಹೋಳಿ ಮತ್ತು ದೀಪಾವಳಿ ಮುಂತಾದ ಹಿಂದೂ ಹಬ್ಬಗಳನ್ನೇ ಟೀಕಿಸುತ್ತಾರೆ, ಬಕ್ರೀದ್ ಬಗ್ಗೆ ಮಾತಾಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News