×
Ad

ಗುಜರಾತ್ | ಗರ್ಬಾ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿನಿಗೆ ಹಲ್ಲೆ : ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ

Update: 2025-09-30 19:38 IST

file photo 

ಅಹ್ಮದಾಬಾದ್,ಸೆ.30: ಗುಜರಾತ್‌ನ ಮಹಿಸಾಗರ ಜಿಲ್ಲೆಯಲ್ಲಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಆಕೆಯ ಕೂದಲು ಹಿಡಿದೆಳೆದು ಕಾರ್ಯಕ್ರಮದಿಂದ ಹೊರಕ್ಕೆ ತಳ್ಳಿದ್ದಕ್ಕಾಗಿ ನಾಲ್ವರು ಮಹಿಳೆಯರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಗಾಂಧಿನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿರುವ ರಿಂಕು ವಂಕಾರ್(25) ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಶುಕ್ರವಾರ ತನ್ನ ಸ್ನೇಹಿತೆಯ ಜೊತೆ ಭರೋಡಿ ಗ್ರಾಮದಲ್ಲಿ ನಡೆದಿದ್ದ ಗರ್ಬಾ ಕಾರ್ಯಕ್ರಮಕ್ಕೆ ಹೋಗಿದ್ದಾಗ ಲೋಮಾ ಪಟೇಲ್, ರೋಶನಿ ಪಟೇಲ್ ಮತ್ತು ವೃಷ್ಟಿ ಪಟೇಲ್ ಎಂಬ ಮೂವರು ಮಹಿಳೆಯರು ತನ್ನನ್ನು ಅವಾಚ್ಯವಾಗಿ ನಿಂದಿಸಿದ್ದರು. ವಾಗ್ವಾದದ ಬಳಿಕ ಅವರು ತನಗೆ ಜಾತಿ ನಿಂದನೆ ಮಾಡಿದ್ದು, ‘ಈ ಜನರು ನಮಗೆ ಸಮಾನರಲ್ಲ ಮತ್ತು ನಮ್ಮೊಂದಿಗೆ ಗರಬಾ ಆಡುವಂತಿಲ್ಲ’ ಎಂದು ಹೇಳಿದ್ದರು. ಬಳಿಕ ಇನ್ನೋರ್ವ ಮಹಿಳೆ ಮೀನಾ ಪಟೇಲ್ ಅವರೊಂದಿಗೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಳು. ಮಹಿಳೆಯರು ತನ್ನ ಕೂದಲು ಹಿಡಿದು ಕಾರ್ಯಕ್ರಮದಿಂದ ಹೊರಕ್ಕೆ ಎಳೆದೊಯ್ದಿದ್ದರು. ತಾನು ಘಟನೆಯ ವೀಡಿಯೊ ಮಾಡುವುದನ್ನು ಇತರರು ತಡೆದಿದ್ದರು ಎಂದು ರಿಂಕು ದೂರಿನಲ್ಲಿ ಆರೋಪಿಸಿದ್ದಾರೆ.

ನಾಲ್ವರು ಮಹಿಳೆಯರ ವಿರುದ್ಧ ಬಿಎನ್ಎಸ್ ಮತ್ತು ಎಸ್ಸಿ,ಎಸ್ಟಿ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ.

ಈ ಬಗ್ಗೆ ಎಸ್ಸಿ,ಎಸ್ಟಿ ಕೋಶದ ಡಿವೈಎಸ್ಪಿ ತನಿಖೆಯನ್ನು ಆರಂಭಿಸಿದ್ದಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮಹಿಸಾಗರ ಎಸ್ಪಿ ಸಫಿನ್ ಹಸನ್ ಅವರು, ‘ಸರ್ವೋಚ್ಚ ನ್ಯಾಯಾಲಯದ ಪೂರ್ವ ನಿದರ್ಶನ ಮತ್ತು ಮಾರ್ಗಸೂಚಿಗಳು ಎಸ್ಸಿ,ಎಸ್ಟಿ ಕಾಯ್ದೆಯಡಿ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣಗಳಲ್ಲಿ ಬಂಧನಗಳನ್ನು ನಿಷೇಧಿಸಿವೆ. ಆರೋಪಿಗಳಿಗೆ ನಾವು ನೋಟಿಸ್‌ಗಳನ್ನು ನೀಡಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News