100 ಕೋಟಿ ಭಾರತೀಯರಲ್ಲಿ ಖರೀದಿ ಸಾಮರ್ಥ್ಯದ ಕೊರತೆಯಿದೆ: ವರದಿ
ಸಾಂದರ್ಭಿಕ ಚಿತ್ರ | iStock Photo
ಹೊಸದಿಲ್ಲಿ : ಭಾರತ ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಆದರೆ, ಕೇವಲ 10% ಜನರು ಮಾತ್ರ ಖರ್ಚು ಮಾಡಲು ಸಾಕಷ್ಟು ಹಣವನ್ನು ಹೊಂದಿದ್ದಾರೆ. 100ಕೋಟಿ ಭಾರತೀಯರಲ್ಲಿ ಖರೀದಿ ಸಾಮರ್ಥ್ಯದ ಕೊರತೆಯಿದೆ ಎಂದು ಬ್ಲೂಮ್ ವೆಂಚರ್ಸ್( Blume Ventures) ವರದಿಯು ತಿಳಿಸಿದೆ.
ಬ್ಲೂಮ್ ವೆಂಚರ್ಸ್ ವರದಿಯು, 100ಕೋಟಿ ಭಾರತೀಯರಲ್ಲಿ ವಿಶೇಷ ವಸ್ತುಗಳ ಖರೀದಿಗೆ ಬೇಕಾದಷ್ಟು ಆದಾಯವಿಲ್ಲ. ಭಾರತದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ತಿಳಿಸಿದೆ.
ʼIndus Valley Annual Report-2025ʼರ ಪ್ರಕಾರ, ಭಾರತದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಳಕೆಯನ್ನು ಅಗ್ರ 10% ಜನರು ಮಾತ್ರ ಉತ್ತೇಜಿಸುತ್ತಿದ್ದಾರೆ. ಈ ಗ್ರಾಹಕ ವರ್ಗವು ವಿಸ್ತಾರವಾಗುತ್ತಿಲ್ಲ. ಆದರೆ, ಆಳವಾಗುತ್ತಿದೆ ಅಂದರೆ ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಭಾರತದಲ್ಲಿ ಈ ಗ್ರಾಹಕ ವರ್ಗವು ಮೆಕ್ಸಿಕೋದ ಜನಸಂಖ್ಯೆಯ ಗಾತ್ರದಷ್ಟಿದೆ ಎಂದು ತಿಳಿಸಿದೆ.
ಭಾರತದಲ್ಲಿ 30 ಕೋಟಿಯಷ್ಟು ಆಕಾಂಕ್ಷಿ ಗ್ರಾಹಕರಿದ್ದಾರೆ. ಅವರ ಜನಸಂಖ್ಯೆಯು ಅಂದಾಜು ಇಂಡೋನೇಷ್ಯಾದ ಜನಸಂಖ್ಯೆಗೆ ಸಮಾನವಾಗಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ತನ್ನ ಗ್ರಾಹಕರ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತಿಲ್ಲವಾದರೂ, ಹೆಚ್ಚಿನ ಆದಾಯದ ಶ್ರೇಣಿಯಲ್ಲಿರುವವರು ಶ್ರೀಮಂತರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಂದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ ಎಂಬುದನ್ನು ಸೂಚಿಸುತ್ತದೆ ಎಂದು ವರದಿಯು ಹೇಳಿದೆ.
ಅರ್ಥಶಾಸ್ತ್ರಜ್ಞರಾದ ಥಾಮಸ್ ಪಿಕೆಟ್ಟಿ ಮತ್ತು ಲ್ಯೂಕಾಸ್ ಚಾನ್ಸೆಲ್ ಅವರ ವಿಶ್ವ ಅಸಮಾನತೆಯ ವರದಿ 2018ರ ಪ್ರಕಾರ, ಭಾರತದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗಿ ಹೆಚ್ಚುತ್ತಿದೆ. 1990ರಲ್ಲಿ ಅಗ್ರ 10 ಪ್ರತಿಶತ ಭಾರತೀಯರು ರಾಷ್ಟ್ರೀಯ ಆದಾಯದ 34 ಪ್ರತಿಶತವನ್ನು ಹೊಂದಿದ್ದರು. 2025ರಲ್ಲಿ ಈ ಸಂಖ್ಯೆಯು 57.7%ಕ್ಕೆ ತಲುಪಿದೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ಕೆಳಸ್ಥರದ ಜನರ ಆದಾಯವು 22.2 ಶೇಕಡಾದಿಂದ 15 ಶೇಕಡಾಕ್ಕೆ ಕುಸಿದಿದೆ. ಭಾರತದ 1% ಶ್ರೀಮಂತ ಭಾರತೀಯರು ಈಗ ದೇಶದ ಒಟ್ಟು ಸಂಪತ್ತಿನ 40.1% ಪಾಲನ್ನು ಹೊಂದಿದ್ದಾರೆ. ಕೆಳಸ್ಥರದ 50% ಜನರ ಬಳಿ ಕೇವಲ 6% ಸಂಪತ್ತಿದೆ ಎಂದು ವರದಿಯು ತಿಳಿಸಿದೆ.