‘ಐ ಲವ್ ಮೋದಿ’ ಎಂದರೆ ಸ್ವಾಗತ, ‘ಐ ಲವ್ ಮುಹಮ್ಮದ್’ ಎಂದರೆ ಆಕ್ಷೇಪ : ಸಂಸದ ಅಸದುದ್ದೀನ್ ಉವೈಸಿ ಆಕ್ರೋಶ
Photo | indiatoday
ಹೈದರಾಬಾದ್, ಅ.3: “ಈ ದೇಶದಲ್ಲಿ ‘ಐ ಲವ್ ಮೋದಿ’ ಎಂದರೆ ಸ್ವಾಗತಿಸುತ್ತಾರೆ, ‘ಐ ಲವ್ ಮುಹಮ್ಮದ್’ ಎಂದರೆ ಆಕ್ಷೇಪ ವ್ಯಕ್ತವಾಗುತ್ತದೆ. ಈ ಎಲ್ಲ ಬೆಳವಣಿಗೆಗಳು ಈ ರಾಷ್ಟ್ರವನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿದೆ?” ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯಲ್ಲಿ “ಐ ಲವ್ ಮುಹಮ್ಮದ್” ಪೋಸ್ಟರ್ ಗಳ ವಿವಾದ ತೀವ್ರಗೊಂಡಿರುವ ಸಂದರ್ಭದಲ್ಲಿ ಉವೈಸಿ ಅವರು ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
“ಯಾರಾದರೂ ‘ಐ ಲವ್ ಮೋದಿ’ ಎಂದರೆ ಮಾಧ್ಯಮಗಳು ಅದನ್ನು ಪ್ರಚಾರ ಮಾಡುತ್ತವೆ. ಆದರೆ ‘ಐ ಲವ್ ಮುಹಮ್ಮದ್’ ಎಂದರೆ ಆಕ್ರೋಶ ವ್ಯಕ್ತವಾಗುತ್ತದೆ. ನಾನು ಮುಸ್ಲಿಂ ಆಗಿರುವುದು ಪ್ರವಾದಿ ಮುಹಮ್ಮದ್‌ರಿಂದಲೇ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ 17 ಕೋಟಿ ಭಾರತೀಯ ಮುಸ್ಲಿಮರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ” ಎಂದು ಅಸದುದ್ದೀನ್ ಉವೈಸಿ ಅಭಿಪ್ರಾಯಪಟ್ಟರು.
ಸೆಪ್ಟೆಂಬರ್ 26ರಂದು ಬರೇಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿದ ಹಿನ್ನೆಲೆಯಲ್ಲಿ ಉವೈಸಿಯವರಿಂದ ಈ ಹೇಳಿಕೆ ಬಂದಿದೆ. ಪ್ರತಿಭಟನಾಕಾರರು ಶುಕ್ರವಾರದ ಪ್ರಾರ್ಥನೆಯ ಬಳಿಕ ಕಲ್ಲು ತೂರಾಟ ನಡೆಸಿದರೆಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (IMC) ನಾಯಕ ನಫೀಸ್ ಖಾನ್ ಹಾಗೂ ಅವರ ಪುತ್ರ ಫರ್ಮಾನ್ ಖಾನ್ ಸೇರಿ ಒಟ್ಟು 81 ಮಂದಿಯನ್ನು ಬಂಧಿಸಿದ್ದಾರೆ.
ಬರೇಲಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಿಂದ 48 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಸರಕಾರದ ನಿಲುವನ್ನು ಟೀಕಿಸಿದ ಉವೈಸಿ, “ಅಸ್ಸಾಂನಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮ ನಿರ್ಮಾಣದ ಹೆಸರಿನಲ್ಲಿ 3,000 ಮುಸ್ಲಿಮರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಪೊಲೀಸರು ಸದಾ ಅಧಿಕಾರದಲ್ಲಿರುವವರ ಪರವಾಗಿಯೇ ಕಾರ್ಯನಿರ್ವಹಿಸುತ್ತಾರೆ” ಎಂದು ಉವೈಸಿ ಆಕ್ರೋಶ ವ್ಯಕ್ತಪಡಿಸಿದರು.