×
Ad

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು

Update: 2023-08-02 17:24 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಇದರೊಂದಿಗೆ ಇಲ್ಲಿ ಮಾರ್ಚ್‌ ತಿಂಗಳಿನಿಂದೀಚೆಗೆ ಸಾವನ್ನಪ್ಪಿದ ಚೀತಾಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

“ಇಂದು ಬೆಳಿಗ್ಗೆ ಹೆಣ್ಣು ಚೀತಾ ಧಾತ್ರಿ (ತಿಬ್ಲಿಸಿ) ಮೃತಪಟ್ಟಿದೆ. ಸಾವಿನ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ,” ಎಂದು ಅರಣ್ಯ ಇಲಾಖೆ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ಕುನೋ ನ್ಯಾಷನಲ್‌ ಪಾರ್ಕಿನಲ್ಲಿ ಏಳು ಗಂಡು, ಆರು ಹೆಣ್ಣು ಚೀತಾಗಳು ಮತ್ತು ಒಂದು ಹೆಣ್ಣು ಚೀತಾ ಮರಿಯನ್ನು ಬೊಮಾಗಳಲ್ಲಿ ಇರಿಸಲಾಗಿದ್ದು ಒಂದು ಹೆಣ್ಣು ಚೀತಾವನ್ನು ಮಾತ್ರ ಸ್ವಚ್ಛಂದವಾಗಿ ತಿರುಗಾಡಲು ಬಿಡಲಾಗಿದ್ದು ಅದರ ಮೇಲೆ ನಿಗಾ ಇರಿಸಲಾಗಿದೆ. ಆದರೆ ಆಕೆಯನ್ನೂ ಮರಳಿ ಬೊಮಾಗೆ ತಂದು ಆರೋಗ್ಯ ತಪಾಸಣೆ ಮಾಡಲು ಚಿಂತಿಸಲಾಗಿದೆ ಎಂದು ಮಧ್ಯ ಪ್ರದೇಶ ಅರಣ್ಯ ಇಲಾಖೆ ಹೇಳಿದೆ.

ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಒಟ್ಟು 20 ರೇಡಿಯೋ-ಕಾಲರ್ಡ್‌ ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಆಮದು ಮಾಡಲಾಗಿತ್ತು. ನಂತರ ನಮೀಬಿಯಾದ ಚೀತಾ ʼಜ್ವಾಲಾʼಗೆ ನಾಲ್ಕು ಮರಿಗಳು ಜನಿಸಿದ್ದವು. ಈ ಒಟ್ಟು 24 ಚೀತಾಗಳ ಪೈಕಿ ಮೂರು ಮರಿಗಳ ಸಹಿತ 9 ಮೃತಪಟ್ಟಿವೆ.

ಮಧ್ಯಪ್ರದೇಶದ ಕುನೋ ನ್ಯಾಷನಲ್‌ ಪಾರ್ಕ್‌ ಇಷ್ಟೊಂದು ಸಂಖ್ಯೆಯ ಚೀತಾಗಳನ್ನು ಇರಿಸಲು ಸ್ಥಳಾವಕಾಶವಿಲ್ಲದೇ ಇರುವುದರಿಂದ ರಾಜಕೀಯ ಬದಿಗಿರಿಸಿ ಅವುಗಳನ್ನು ರಾಜಸ್ಥಾನಕ್ಕೆ ಸಾಗಿಸಬೇಕು, ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಚೀತಾಗಳ ಸಾವು ಒಳ್ಳೆಯ ಚಿತ್ರಣವನ್ನು ಬಿಂಬಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಜುಲೈ 20ರಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News