×
Ad

ʼಆಪರೇಷನ್ ಸಿಂಧೂರʼ | ಪತ್ರಿಕಾಗೋಷ್ಠಿಯ ನೇತೃತ್ವ ವಹಿಸಿದ್ದ ಇಬ್ಬರು ಮಹಿಳಾ ಅಧಿಕಾರಿಗಳು

Update: 2025-05-07 16:13 IST

ಸೋಫಿಯಾ ಕುರೇಷಿ, ವ್ಯೋಮಿಕಾ ಸಿಂಗ್ | PTI

ಹೊಸದಿಲ್ಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತೀಯ ಸೇನೆ ನಡೆಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಎಪ್ರಿಲ್ 22 ರಂದು 26 ಜನರ ಹತ್ಯೆಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕಾರದ ಬಗ್ಗೆ ಮಾಹಿತಿ ನೀಡಿದರು. ಇಬ್ಬರು ಮಹಿಳಾ ಅಧಿಕಾರಿಗಳು ಪತ್ರಿಕಾಗೋಷ್ಠಿಯ ನೇತೃತ್ವ ವಹಿಸಿದ್ದರು.

ಸಿಂಧೂರ ವಿವಾಹಿತ ಹಿಂದೂ ಮಹಿಳೆಯರ ಸಂಕೇತವಾಗಿದೆ. ಪಹಲ್ಗಾಮ್ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದೆ.

ಕರ್ನಲ್ ಸೋಫಿಯಾ ಕುರೇಷಿ: 

ಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಗುಜರಾತ್ ಮೂಲದವರು. ಮೂಲತಃ ಮಿಲಿಟರಿ ಕುಟುಂಬಕ್ಕೆ ಸೇರಿದವರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1999 ರಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಕುರೇಷಿ 2006 ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದರು.

2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತಿನಲ್ಲಿ ಅವರು ಭಾರತದ ತಂಡವನ್ನು ಮುನ್ನಡೆಸಿದ್ದರು. ಕವಾಯತಿನಲ್ಲಿ ಪಾಲ್ಗೊಂಡಿದ್ದ 18 ರಾಷ್ಟ್ರಗಳ ಪೈಕಿ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.

ಸೋಫಿಯಾ ಕುರೇಷಿ ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ್ದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಅವರಿಂದ ಪ್ರಶಂಸಾ ಪತ್ರವನ್ನು ಪಡೆದಿದ್ದರು. ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಮಾಡಿದ ಅತ್ಯುತ್ತಮ ಕೆಲಸಕ್ಕಾಗಿ ಸಿಗ್ನಲ್ ಆಫೀಸರ್ ಇನ್ ಚೀಫ್ ಅವರಿಂದ ಪ್ರಶಂಸಾ ಪತ್ರವನ್ನು ಪಡೆದಿದ್ದರು.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್:

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರಿಗೆ ಬಾಲ್ಯದಲ್ಲೇ ವಾಯುಪಡೆಗೆ ಸೇರಬೇಕೆಂಬ ಆಸೆ ಇತ್ತು. ಶಾಲಾ ದಿನಗಳಿಂದಲೂ ಅವರಿಗೆ ವಿಮಾನ ಹಾರಾಟ ನಡೆಸಬೇಕೆಂಬ ಆಸೆ ಇತ್ತು. ಅವರು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಗೆ ಸೇರುವ ಮೂಲಕ ತಮ್ಮ ಗುರಿಯನ್ನು ಸಾಧಿಸಿದರು. ನಂತರ ಎಂಜಿನಿಯರಿಂಗ್ ಪೂರ್ಣಗೊಳಿಸಿದರು.

2004ರ ಡಿ.18ರಲ್ಲಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡ ವ್ಯೂಮಿಕಾ ಸಿಂಗ್ ಅವರು ಪ್ರಸ್ತುತ ಅತ್ಯುತ್ತಮ ವಿಂಗ್ ಕಮಾಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಚೀತಾ, ಚೇತಕ್‌ನಂತಹ ಯುದ್ಧ ಹೆಲಿಕಾಪ್ಟರ್‌ಗಳನ್ನು ಹಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ವಾಯುಪಡೆಗೆ ನಿಯೋಜನೆಗೊಂಡ ಆರಂಭದಲ್ಲಿ ಅವರು ಹೆಲಿಕಾಪ್ಟರ್ ಪೈಲಟ್ ಆಗಿದ್ದರು. ಸತತ ಕಠಿಣ ಪರಿಶ್ರಮದಿಂದ 13 ವರ್ಷಗಳ ಬಳಿಕ 2017ರ ಡಿ.18ರಲ್ಲಿ ಇವರಿಗೆ ವಿಂಗ್ ಕಮಾಂಡರ್ ಹುದ್ದೆ ನೀಡಲಾಯಿತು. 2021ರಲ್ಲಿ ವ್ಯೋಮಿಕಾ ಸಿಂಗ್ ಮಣಿರಾಂಗ್ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದ ಭಾಗವಾಗಿದ್ದರು. ಇದು ಐತಿಹಾಸಿಕ ಸಾಧನೆಯೂ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News