Lokasabha | ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನೋಟಿಸ್ ; 118 ಸದಸ್ಯರಿಂದ ಸಹಿ, ಹೊರಗುಳಿದ ಟಿಎಂಸಿ
Photo credit: PTI
ತನ್ನ ವಿರುದ್ಧ ಪ್ರತಿಪಕ್ಷಗಳು ಮಂಡಿಸಲಿರುವ ಅವಿಶ್ವಾಸ ನಿರ್ಣಯದ ನೋಟಿಸನ್ನು ಪರಿಶೀಲಿಸಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಲೋಕಸಭಾ ಕಾರ್ಯಾಲಯಕ್ಕೆ ಸೂಚನೆ ನೀಡಿದ್ದಾರೆ.
ನೂರ ಹದಿನೆಂಟು ಸಹಿಗಳನ್ನು ಹೊಂದಿರುವ ನಿರ್ಣಯವನ್ನು ಕಾಂಗ್ರೆಸ್ ನಾಯಕರಾದ ಕೆ. ಸುರೇಶ್, ಗೌರವ್ ಗೊಗೋಯ್ ಮತ್ತು ಮುಹಮ್ಮದ್ ಜಾವೇದ್ ಲೋಕಸಭಾ ಮಹಾಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್‌ಗೆ ಸಲ್ಲಿಸಿದ್ದಾರೆ. ನಿರ್ಣಯ ಸಲ್ಲಿಕೆಯಾದ ಸ್ವಲ್ಪವೇ ಹೊತ್ತಿನಲ್ಲಿ ಸ್ಪೀಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪೀಕರ್ ಓಮ್ ಬಿರ್ಲಾ ಲೋಕಸಭಾ ಕಲಾಪಗಳನ್ನು ‘‘ಅತ್ಯಂತ ಏಕಪಕ್ಷೀಯ ರೀತಿ’’ಯಲ್ಲಿ ನಡೆಸುತ್ತಿದ್ದಾರೆ ಎಂಬುದಾಗಿ ಸಂವಿಧಾನದ 94(ಸಿ) ವಿಧಿಯಡಿಯಲ್ಲಿ ಸಲ್ಲಿಸಲಾಗಿರುವ ನಿರ್ಣಯದಲ್ಲಿ ಹೇಳಲಾಗಿದೆ. ಸದನದಲ್ಲಿ ಮಾತನಾಡಲು ಪ್ರತಿಪಕ್ಷಗಳ ನಾಯಕರಿಗೆ ಪದೇ ಪದೇ ಅವಕಾಶಗಳನ್ನು ನಿರಾಕರಿಸಲಾಗಿದೆ ಹಾಗೂ ಇದು ಅವರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಿನ ನಿರಾಕರಣೆಯಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನವು ಭಾರೀ ಕೋಲಾಹಕ್ಕೆ ಸಾಕ್ಷಿಯಾಗಿದೆ. ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕ ಅಭಿಶೇಕ್ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಮತ್ತು ಸರಕಾರದ ಉನ್ನತ ನಾಯಕರನ್ನು ಸ್ಪೀಕರ್ ಭೇಟಿಯಾಗಿದ್ದರು.