×
Ad

ಗುಣಮಟ್ಟ ಪರೀಕ್ಷೆಯಲ್ಲಿ ಪತಂಜಲಿ ತುಪ್ಪ ವಿಫಲ: ಕಂಪೆನಿಗಳಿಗೆ 1.40 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

Update: 2025-12-01 20:44 IST

Photo Credit : PTI 

ಪಿತೋರ್‌ಗಢ, ಡಿ. 1: ಭಾರತದ ಪ್ರಮುಖ ಕಂಪೆನಿ ಪತಂಜಲಿ ತಯಾರಿಸಿರುವ ತುಪ್ಪದ ಮಾದರಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದ ಸ್ಥಳೀಯ ನ್ಯಾಯಾಲಯ ಪತಂಜಲಿ ಕಂಪೆನಿಗೆ ಭಾರೀ ಮೊತ್ತದ ದಂಡ ವಿಧಿಸಿದೆ.

ರಾಷ್ಟ್ರ ಹಾಗೂ ರಾಜ್ಯದ ಪ್ರಯೋಗಾಲಯಗಳು ತುಪ್ಪದ ಮಾದರಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿರುವುದನ್ನು ದೃಢಪಡಿಸಿವೆ. ಅಲ್ಲದೆ, ಪರೀಕ್ಷೆಯಲ್ಲಿ ತುಪ್ಪ ಕಲಬೆರೆಕೆಯಾಗಿರುವುದು ಬಹಿರಂಗಗೊಂಡಿದೆ. ಈ ಕಾರಣಕ್ಕಾಗಿ ನ್ಯಾಯಾಲಯ ಉತ್ಪಾದಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗೆ ಒಟ್ಟು 1.40 ಲಕ್ಷ ರೂ. ದಂಡ ವಿಧಿಸಿದೆ.

ಈ ಪ್ರಕರಣ ಅಕ್ಟೋಬರ್ 2020ರಲ್ಲಿ ದಾಖಲಾಗಿದೆ. ಹಿರಿಯ ಆಹಾರ ಸುರಕ್ಷಾ ಅಧಿಕಾರಿ ದಿಲೀಪ್ ಜೈನ್ ನಿಯಮಿತ ತಪಾಸಣೆಗಾಗಿ ಪಿಥೋರ್‌ಗಢದ ಕಶ್ನಿಯಲ್ಲಿರುವ ಕರಣ್ ಜನರಲ್ ಸ್ಟೋರ್‌ನಿಂದ ಪತಂಜಲಿ ತುಪ್ಪದ ಮಾದರಿ ಸಂಗ್ರಹಿಸಿದ್ದರು.

ರುದ್ರಪುರದ ಸರಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಆರಂಭಿಕ ಪರೀಕ್ಷೆಯಲ್ಲಿ ಈ ತುಪ್ಪದ ಮಾದರಿ ನಿಗದಿತ ಮಾನದಂಡಗಳನ್ನು ಪೂರೈಸಿಲ್ಲ ಎಂಬುದು ಬಹಿರಂಗಗೊಂಡಿದೆ ಹಾಗೂ ಕಲಬೆರೆಕೆ ಪದಾರ್ಥಗಳನ್ನು ಹೊಂದಿರುವುದನ್ನು ದೃಢಪಡಿಸಿದೆ. ಆರಂಭಿಕ ವಿಫಲತೆಯ ನಂತರ ಪತಂಜಲಿ ಆಯುರ್ವೇದ ಲಿಮಿಟೆಡ್ ಈ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ನಿರ್ಣಾಯಕ ಪರೀಕ್ಷೆಗಾಗಿ ತುಪ್ಪದ ಮಾದರಿಯನ್ನು ಗಾಝಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಯಿತು.

ರಾಷ್ಟ್ರೀಯ ಪ್ರಯೋಗಾಲಯ ಕೂಡ ಉತ್ಪನ್ನ ಕಳಪೆ ಎಂದು ದೃಢಪಡಿಸಿತು. ಇದು ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧದ ಪ್ರಕರಣವನ್ನು ಬಲಪಡಿಸಿತು. ಅನಂತರ ಆಹಾರ ಸುರಕ್ಷಾ ಅಧಿಕಾರಿ ಪಿತೋರ್‌ಗಢದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ಎಲ್ಲಾ ವಾದಗಳನ್ನು ಆಲಿಸಿದ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಆರೋಪಿಗಳ ವಿರುದ್ಧ ತೀರ್ಪು ನೀಡಿತು.

ಈ ತೀರ್ಪಿನಲ್ಲಿ ನ್ಯಾಯಾಲಯ ಉತ್ಪಾದಕ ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ 1 ಲಕ್ಷ ರೂ., ವಿತರಕ ಬ್ರಹ್ಮ ಆಕ್ಸೆಸೆರೀಸ್‌ಗೆ 25 ಸಾವಿರ ರೂ. ಹಾಗೂ ಕರಣ್ ಜನರಲ್ ಸ್ಟೋರ್‌ಗೆ 15 ಸಾವಿರ ರೂ. ದಂಡ ವಿಧಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News