ಪ್ರತಿ ಭಾರತೀಯನ ಮೇಲಿನ ಸಾಲದ ಹೊರೆ 4.8 ಲಕ್ಷ ರೂ.ಗಳಿಗೆ ಏರಿಕೆ: ಆರ್‌ಬಿಐ
Photo credit: PTI
ಹೊಸದಿಲ್ಲಿ : ಕಳೆದ ಎರಡು ವರ್ಷಗಳಲ್ಲಿ ಪ್ರತಿಯೋರ್ವ ಭಾರತೀಯನ ಮೇಲಿನ ಸಾಲದ ಹೊರೆ 3.9 ಲಕ್ಷ ರೂ.ಗಳಿಂದ 4.8 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ಸ್ಥಿರತೆ ವರದಿಯು ತಿಳಿಸಿದೆ.
2023ರ ಮಾರ್ಚ್‌ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.9 ಲಕ್ಷ ರೂ.ನಷ್ಟು ಸಾಲವಿತ್ತು. ಮಾರ್ಚ್ 2025ರ ವೇಳೆಗೆ ಇದು ಶೇ.23ರಷ್ಟು ಹೆಚ್ಚಳವಾಗಿ 4.8 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಅಂದರೆ, ಪ್ರತಿಯೋರ್ವನ ಸಾಲದ ಹೊರೆ ಕಳೆದೆರಡು ವರ್ಷದಲ್ಲಿ 90 ಸಾವಿರ ರೂ.ಗಳಷ್ಟು ಹೆಚ್ಚಾಗಿದೆ ಎಂದು ವಿತ್ತೀಯ ಸ್ಥಿರತೆ ವರದಿಯು ತಿಳಿಸಿದೆ.
ಗೃಹ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ವೆಚ್ಚ ಮತ್ತು ಇತರೆ ಸಾಲಗಳಿಂದಾಗಿ ಸಾಲದ ಹೊರೆ ಏರಿಕೆ ಕಂಡಿದೆ. ಗೃಹೇತರ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಲೋನ್‌ನಲ್ಲೂ ಕಳೆದ ಎರಡು ವರ್ಷಗಳಲ್ಲಿ ಭಾರೀ ಏರಿಕೆಯಾಗಿದೆ. ಈ ಸಾಲ ಒಟ್ಟಾರೆ ದೇಶೀಯ ಸಾಲದ ಶೇ.54.9ರಷ್ಟಿದೆ. ಇನ್ನು ಗೃಹ ಸಾಲದ ಪ್ರಮಾಣ ಶೇ.29ರಷ್ಟಿದೆ. ಇದಲ್ಲದೆ ಲೋನ್-ಟು-ವ್ಯಾಲ್ಯೂ (ಎಲ್‌ಟಿವಿ) ಪ್ರಮಾಣದಲ್ಲಿನ ಹೆಚ್ಚಳದ ಬಗ್ಗೆ ಕೂಡ ವರದಿಯು ಕಳವಳ ವ್ಯಕ್ತಪಡಿಸಿದೆ, ಇದು ಶೇ.70ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಸಾಲಗಾರರ ತಲಾ ಸಾಲವು ಗಗನಕ್ಕೇರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಬಹಿರಂಗಪಡಿಸಿದ ಬೆನ್ನಲ್ಲೇ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶವನ್ನು ವ್ಯಕ್ತಪಡಿಸಿದೆ. ಮೋದಿ ರಾಜ್ಯದಲ್ಲಿ ಪ್ರತಿಯೊಬ್ಬ ನಾಗರಿಕ 4.8 ಲಕ್ಷ ರೂ. ಸಾಲದಲ್ಲಿ ಸಿಲುಕಿರುವುದು ಏಕೆ? ಎಂದು ಪ್ರಶ್ನಿಸಿದೆ, ಕೇಂದ್ರವು ಬಂಡವಾಳಶಾಹಿ ಸ್ನೇಹಿತರಿಗೆ ನೆರವು ನೀಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸಾಮಾನ್ಯ ನಾಗರಿಕರನ್ನು ಸಾಲಕ್ಕೆ ತಳ್ಳುತ್ತಿದೆ ಮತ್ತು ಕಾರ್ಪೊರೇಟ್ ಸ್ನೇಹಿತರಿಗೆ ಅನುಕೂಲ ಮಾಡಿಕೊಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ 4,80,000 ರೂ.ಗಳ ಸಾಲದ ಹೊರೆ ಯಾಕೆ ಇದೆ? ಎಂದು ಪ್ರಶ್ನಿಸಿದ್ದಾರೆ.
ʼಅಚ್ಛೇ ದಿನದ ಸಾಲ! ಕಳೆದ ಹನ್ನೊಂದು ವರ್ಷಗಳಲ್ಲಿ ಮೋದಿ ಸರಕಾರ ದೇಶದ ಆರ್ಥಿಕತೆಯನ್ನು ಹಾಳುಮಾಡಿದೆ. ಜನರ ಜೀವನವನ್ನು ಸುಧಾರಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಎಲ್ಲಾ ನೀತಿಗಳನ್ನು ಬಂಡವಾಳಶಾಹಿ ಸ್ನೇಹಿತರಿಗಾಗಿ ಮಾತ್ರ ಮಾಡಲಾಗಿದೆ. ಅದರ ನಷ್ಟವನ್ನು ಇಂದು ದೇಶದ ಜನರು ಅನುಭವಿಸುತ್ತಿದ್ದಾರೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ರೈತರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಜನರು ಹಣದುಬ್ಬರದಿಂದ ತೊಂದರೆಗೊಳಗಾಗಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳಿಗೆ ಹಾನಿಯಾಗುತ್ತದೆ. ಜನರು ಸಾಲದಲ್ಲಿ ಮುಳುಗುತ್ತಿದ್ದಾರೆ. ಆದರೆ, ಮೋದಿ ಜಿ ಅವರ ಆಪ್ತ ಸ್ನೇಹಿತರು ಲಾಭ ಗಳಿಸುತ್ತಿದ್ದಾರೆ. ಅವರ ಸಂಪತ್ತು ಹೆಚ್ಚುತ್ತಿದೆ. 2 ವರ್ಷಗಳಲ್ಲಿ ತಲಾ ಸಾಲವು 90,000 ರೂ.ಗಳಷ್ಟು ಹೆಚ್ಚಾಗಿ 4.8 ಲಕ್ಷ ರೂ.ಗಳಿಗೆ ಏರಿಕೆಯಾಗಿದೆʼ ಎಂದು ಜೈರಾಮ್ ರಮೇಶ್ ಹೇಳಿದರು.
ಇದು ತೀವ್ರವಾಗಿ ಚಿಂತಿಸುವ ವಿಷಯ. ಮೇಲಾಧಾರ ಅಥವಾ ಭದ್ರತೆ ಇಲ್ಲದೆ ನೀಡುವ ಸಾಲಗಳಲ್ಲೂ 25% ದಾಟಿವೆ. ಬಾಹ್ಯ ಸಾಲವು ಮಾರ್ಚ್ 2025ರ ವೇಳೆಗೆ 736.3 ಬಿಲಿಯನ್ ಡಾಲರ್ ತಲುಪಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಹೆಚ್ಚಾಗಿದೆ. ಮೋದಿ ರಾಜ್‌ನಲ್ಲಿ ದೇಶದ ಮೇಲಿನ ಸಾಲದ ಹೊರೆ ಉತ್ತುಂಗದಲ್ಲಿದೆ ಎಂಬ ಸತ್ಯವನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದರು.