ಪ್ರಧಾನಿ ಮೋದಿ- ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ದ್ವಿಪಕ್ಷೀಯ ಸಭೆ | ವ್ಯಾಪಾರ, ರಕ್ಷಣಾ ಸಹಕಾರ ಕುರಿತು ಮಾತುಕತೆ
Photo: thehansindia
ಮುಂಬೈ,ಫೆ.17: ಹೆಚ್ಚುತ್ತಿರುವ ಭೂರಾಜಕೀಯ ಏರಿಳಿತಗಳ ಹಿನ್ನೆಲೆಯಲ್ಲಿ ರಕ್ಷಣೆ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಮನಾರ್ಹವಾಗಿ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ಬದ್ಧತೆಯನ್ನು ವ್ಯಕ್ತಪಡಿಸುವುದರೊಂದಿಗೆ ಭಾರತ ಮತ್ತು ಫ್ರಾನ್ಸ್ ಮಂಗಳವಾರ ತಮ್ಮ ನಡುವಿನ ಸಂಬಂಧಗಳನ್ನು ‘ವಿಶೇಷ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ’ಗೆ ಹೆಚ್ಚಿಸಲು ನಿರ್ಧರಿಸಿವೆ.
ಇದೇ ವೇಳೆ ಕರ್ನಾಟಕದ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಏರ್‌ಬಸ್ ಎಚ್125 ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕಾಗಿ ಜೋಡಣಾ ಘಟಕವನ್ನು ಉಭಯ ನಾಯಕರು ವರ್ಚುವಲ್ ಆಗಿ ಉದ್ಘಾಟಿಸಿದರು.
ಮ್ಯಾಕ್ರನ್ ಮೂರು ದಿನಗಳ ಭಾರತ ಭೇಟಿಗಾಗಿ ಮಂಗಳವಾರ ಮುಂಬೈಗೆ ಆಗಮಿಸಿದ್ದು, ಮೋದಿ ಮತ್ತು ಫ್ರೆಂಚ್ ಅಧ್ಯಕ್ಷರು ಇಲ್ಲಿ ವ್ಯಾಪಕ ಮಾತುಕತೆಗಳನ್ನು ನಡೆಸಿದರು.
‘ಭಾರತ ಮತ್ತು ಫ್ರಾನ್ಸ್ ಬಹಳ ವಿಶೇಷವಾದ ಸಂಬಂಧವನ್ನು ಹಂಚಿಕೊಂಡಿವೆ. ಫ್ರಾನ್ಸ್ ಭಾರತದ ಅತ್ಯಂತ ಹಳೆಯ ವ್ಯಹಾತ್ಮಕ ಪಾಲುದಾರಲ್ಲಿ ಒಂದಾಗಿದೆ. ಅಧ್ಯಕ್ಷ ಮ್ಯಾಕ್ರನಿ ಜೊತೆ ಸೇರಿ ನಾವು ಈ ವ್ಯೆಹಾತ್ಮಕ ಪಾಲುದಾರಿಕೆಗೆ ಈ ವ್ಯಹಾತ್ಮಕ ಪಾಲುದಾರಿಕೆಗೆ ಅಭೂತಪೂರ್ವ ಆಳ ಮತ್ತು ಬಲವನ್ನು ನೀಡಿದ್ದೇವೆ’ ಎಂದು ಮೋದಿ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದರು.
‘‘ಇದೇ ನಂಬಿಕೆ ಮತ್ತು ಪರಸ್ಪರ ಹಂಚಿಕೊಂಡ ದೃಷ್ಟಿಕೋನದ ಆಧಾರದಲ್ಲಿ ನಾವು ಇಂದು ನಮ್ಮ ನಡುವಿನ ಸಂಬಂಧವನ್ನು ‘ವಿಶೇಷ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ’ಯಾಗಿ ಮೇಲ್ದರ್ಜೆಗೇರಿಸಿದ್ದೇವೆ’’ ಎಂದರು.
ಎಚ್-125 ಹೆಲಿಕಾಪ್ಟರ್ ಜೋಡಣಾ ಘಟಕವನ್ನೂ ಉಲ್ಲೇಖಿಸಿದ ಮೋದಿ, ‘ಭಾರತ ಮತ್ತು ಫ್ರಾನ್ಸ್ ಎವರೆಸ್ಟ್ ಶಿಖರದ ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ಹೆಲಿಕಾಪ್ಟರ್‌ನ್ನು ಭಾರತದಲ್ಲಿ ತಯಾರಿಸಲಿವೆ ಮತ್ತು ಇಡೀ ವಿಶ್ವಕ್ಕೆ ಅದನ್ನು ರಫ್ತು ಮಾಡಲಿದ್ದು,ಇದು ನಮಗೆ ತುಂಬ ಹೆಮ್ಮೆಯನ್ನುಂಟು ಮಾಡಿದೆ’ ಎಂದು ಹೇಳಿದರು.
‘2026 ಭಾರತ ಮತ್ತು ಯುರೋಪ್ ನಡುವಿನ ಸಂಬಂಧಗಳಿಗೆ ಮಹತ್ವದ ತಿರುವು ನೀಡಿರುವ ವರ್ಷವಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಐರೋಪ್ಯ ಒಕ್ಕೂಟದೊಂದಿಗೆ ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ’ ಎಂದು ಹೇಳಿದ ಮೋದಿ, ಜಗತ್ತು ಇಂದು ಅನಿಶ್ಚಿತತೆಯ ಹಂತದ ಮೂಲಕ ಹಾದು ಹೋಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ-ಫ್ರಾನ್ಸ್ ಸಂಬಂಧವು ಜಾಗತಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಭಾರತವು ಫ್ರಾನ್ಸ್‌ನ ಅತ್ಯಂತ ವಿಶ್ವಾಸಾರ್ಹ ಪಾಲುದಾರ ದೇಶಗಳಲ್ಲಿ ಒಂದಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ ಮ್ಯಾಕ್ರನಿ,‘ರಫೇಲ್ ಯುದ್ಧವಿಮಾನಗಳಿಂದ ಹಿಡಿದು ಜಲಾಂತರ್ಗಾಮಿ ನೌಕೆಗಳವರೆಗೆ ನಾವು ನಮ್ಮ ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿದ್ದೇವೆ’ ಎಂದು ಹೇಳಿದರು.
‘ನಮ್ಮ ಉಭಯ ದೇಶಗಳು ಕಾನೂನಿನ ಆಡಳಿತದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿವೆ ಮತ್ತು ಕಳೆದ ಕೆಲವು ಕೆಲವು ವರ್ಷಗಳಲ್ಲಿ ಅದು ಸಾಬೀತಾಗಿದೆ’ಎಂದು ಹೇಳಿದ ಅವರು,ಭಯೋತ್ಪಾದನೆಯನ್ನು ಎದುರಿಸಲು ಭಾರತ ಮತ್ತು ಫ್ರಾನ್ಸ್ ಪರಸ್ಪರ ಸಹಕಾರವನ್ನು ಮಂದುವರಿಸಲಿವೆ ಎಂದರು.