×
Ad

ಉತ್ತರ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಾಲಕಿಯರ ಮೃತದೇಹ ಪತ್ತೆ ಪ್ರಕರಣ: ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದ ಮರಣೋತ್ತರ ಪರೀಕ್ಷೆ ವರದಿ

Update: 2024-08-28 20:31 IST

   ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರಪ್ರದೇಶದ ಫಾರೂಕಾಬಾದ್‌ನ ಕೈಮ್‌ಗಂಜ್ ಪಟ್ಟಣದ ಭಗೌತಿಪುರದಲ್ಲಿ ಮರವೊಂದರಲ್ಲಿ ನೇತುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಇಬ್ಬರು ಹದಿಹರೆಯದ ಬಾಲಕಿಯರ ಮರಣೋತ್ತರ ಪರೀಕ್ಷೆ ಸಂಪೂರ್ಣಗೊಂಡಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅವನೀಂದ್ರ ಕುಮಾರ್ ಹೇಳಿದ್ದಾರೆ. ಅವರ ಮೇಲೆ ಲೈಂಗಿಕ ಅಥವಾ ದೈಹಿಕ ದೌರ್ಜನ್ಯ ನಡೆದಿರುವ ಬಗ್ಗೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಅವರು ಹೇಳಿದ್ದಾರೆ.

ಬಾಲಕಿಯರ ಮೃತದೇಹಗಳನ್ನು ಬುಧವಾರ ಚಿತಾಗಾರಕ್ಕೆ ಒಯ್ಯಲಾಯಿತು.

‘‘ಇಬ್ಬರೂ ಬಾಲಕಿಯರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಅವರ ಮೇಲೆ ಲೈಂಗಿಕ ಅಥವಾ ದೈಹಿಕ ದಾಳಿಯಾಗಿರುವ ಯಾವುದೇ ಪುರಾವೆ ಇಲ್ಲ’’ ಎಂದು ಫಾರೂಕಾಬಾದ್‌ನ ಮುಖ್ಯ ವೈದ್ಯಾಧಿಕಾರಿ ಅವನೀಂದ್ರ ಕುಮಾರ್ ಹೇಳಿದರು.

ಇಬ್ಬರು ಬಾಲಕಿಯರು ಆತ್ಮೀಯ ಗೆಳತಿಯರಾಗಿದ್ದರು ಮತ್ತು ಅವರು ಆತ್ಮಹತ್ಯೆ ಮಾಡಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಫಾರೂಕಾಬಾದ್ ಪೊಲೀಸ್ ಸೂಪರಿಂಟೆಂಡೆಂಡ್ ಅಲೋಕ್ ಪ್ರಿಯದರ್ಶಿ ಹೇಳಿದರು.

‘‘ಇಬ್ಬರು ಬಾಲಕಿಯರು (18 ಮತ್ತು 15 ವರ್ಷ) ಮರವೊಂದರಲ್ಲಿ ನೇತಾಡುತ್ತಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ನಮಗೆ ಕೈಮಗಂಜ್ ಗ್ರಾಮದಿಂದ ಬಂದಿದೆ. ಪೊಲೀಸರು ಅಲ್ಲಿಗೆ ಹೋದರು. ಇಬ್ಬರೂ ಬಾಲಕಿಯರು ಆಪ್ತ ಸ್ನೇಹಿತೆಯರು ಎನ್ನುವುದು ಗೊತ್ತಾಗಿದೆ. ಇಬ್ಬರೂ ಒಂದೇ ದುಪಟ್ಟದಿಂದ ನೇಣು ಹಾಕಿಕೊಂಡಿದ್ದಾರೆ. ಇದನ್ನು ಸ್ವತಃ ಬಾಲಕಿಯರೇ ಮಾಡಿದ್ದಾರೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ಮರಣೋತ್ತರ ಪರೀಕ್ಷೆಯ ಬಳಿಕ ವಿಷಯ ಸ್ಪಷ್ಟವಾಗಲಿದೆ’’ ಎಂದು ಪ್ರಿಯದರ್ಶಿ ಹೇಳಿದರು.

ಬಾಲಕಿಯರನ್ನು ಕೊಲೆ ಮಾಡಲಾಗಿದೆ: ಕುಟುಂಬ ಸದಸ್ಯರ ಆರೋಪ

ಆದರೆ, ಬಾಲಕಿಯರ ಕುಟುಂಬ ಸದಸ್ಯರು ಈ ಸಾವುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಾಲಕಿಯ ದೇಹಕ್ಕೆ ಮುಳ್ಳುಗಳು ಕಂತಿವೆ ಮತ್ತು ದೇಹದ ಮೇಲೆ ಬೆಲ್ಟ್‌ನ ಗುರುತು ಇದೆ ಎಂದು ಅವರು ಹೇಳಿದ್ದಾರೆ.

‘‘ನಾವು ಕೊಲೆ ಆರೋಪವನ್ನು ಯಾಕೆ ಮಾಡುತ್ತಿದ್ದೇವೆಂದರೆ, ಹೆಚ್ಚು ತೂಕದ ಬಾಲಕಿ ಮೇಲೆ ಇದ್ದಳು ಮತ್ತು ಕಡಿಮೆ ತೂಕದ ಬಾಲಕಿ ಕೆಳಗಿದ್ದಳು. ಅವಳ ಕಾಲಿನಲ್ಲಿ ಗಾಯದ ಗುರುತುಗಳಿವೆ ಮತ್ತು ದೇಹಕ್ಕೆ ಮುಳ್ಳುಗಳು ಕಂತಿದ್ದವು. ಅವಳ ದೇಹದ ಮೇಲೆ ಬೆಲ್ಟ್‌ಗಳ ಗುರುತೂ ಇತ್ತು’’ ಎಂದು ಓರ್ವ ಬಾಲಕಿಯ ತಂದೆ ಹೇಳಿದರು.

‘‘ಸರಿಯಾದ ತನಿಖೆ ನಡೆದು ಪಾತಕಿಗಳಿಗೆ ಶಿಕ್ಷೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ಎಫ್‌ಐಆರ್ ದಾಖಲಾಗಿಲ್ಲ. ಬಾಲಕಿಯರನ್ನು ಕೊಲೆಗೈಯಲಾಗಿದೆ ಎನ್ನುವುದು ನಮಗೆ ಖಾತರಿಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ನಾವು ಅವರ ಮಾತನ್ನು ಒಪ್ಪುವುದಿಲ್ಲ’’ ಎಂದು ಅವರು ನುಡಿದರು.

ತಾನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದ ಅವರು, ನ್ಯಾಯೋಚಿತ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News