ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವಿರುದ್ಧ ಪ್ರತಿಭಟನೆ: ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ | PC : PTI
ಮುಂಬೈ,ಸೆ. 13: ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಶ್ಯಾ ಕಪ್ ಕ್ರಿಕೆಟ್ ಪಂದ್ಯದ ವಿರುದ್ದ ತನ್ನ ಪಕ್ಷ ಮಹಾರಾಷ್ಟ್ರದಾದ್ಯಂತ ರವಿವಾರ ಪ್ರತಿಭಟನೆ ಆಯೋಜಿಸಲಿದೆ ಎಂದು ಶಿವಸೇನಾ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ ಶನಿವಾರ ಘೋಷಿಸಿದ್ದಾರೆ.
ಮುಂಬೈಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರವಿವಾರ ನಡೆಯಲಿರುವ ಉಭಯ ರಾಷ್ಟ್ರಗಳ ನಡುವಿನ ಏಶ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವುದು ಭಯೋತ್ಪಾದನೆಯ ವಿರುದ್ಧದ ತಮ್ಮ ನಿಲುವನ್ನು ಜಗತ್ತಿಗೆ ತಿಳಿಸಲು ಇರುವ ಅವಕಾಶ ಎಂದರು.
‘‘ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ ಎಂದು ನಮ್ಮ ಪ್ರಧಾನಿ ಹೇಳಿದ್ದಾರೆ. ಆದುದರಿಂದ ರಕ್ತ ಹಾಗೂ ಕ್ರಿಕೆಟ್ ಒಟ್ಟಾಗಿ ಹರಿಯಲು ಹೇಗೆ ಸಾಧ್ಯ ? ಯುದ್ಧ ಹಾಗೂ ಕ್ರಿಕೆಟ್ ಒಟ್ಟಿಗೆ ನಡೆಯಲು ಹೇಗೆ ಸಾಧ್ಯ? ಅವರು ದೇಶಭಕ್ತಿಯ ವ್ಯಾಪಾರ ಮಾಡಿದ್ದಾರೆ. ದೇಶಭಕ್ತಿಯ ವ್ಯಾಪಾರ ಹಣಕ್ಕಾಗಿ ಮಾತ್ರ. ಅವರು ನಾಳೆಯ ಪಂದ್ಯದಲ್ಲಿ ಕೂಡ ಆಡಲಿದ್ದಾರೆ. ಯಾಕೆಂದರೆ, ಅವರಿಗೆ ಪಂದ್ಯದಿಂದ ಸಿಗುವ ಎಲ್ಲಾ ಹಣ ಬೇಕು’’ ಎಂದು ಅವರು ಹೇಳಿದ್ದಾರೆ.
‘‘ನಾಳೆ ಶಿವಸೇನಾ (ಯುಬಿಟಿ)ದ ಮಹಿಳಾ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಬೀದಿಗಿಳಿಯಲಿದ್ದಾರೆ. ಅಲ್ಲದೆ, ಅವರು ಪ್ರತಿಯೊಂದು ಮನೆಯಿಂದ ಸಿಂಧೂರವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲಿದ್ದಾರೆ’’ ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಠಾಕ್ರೆ, ಕ್ರಿಕೆಟ್ ಪಂದ್ಯವನ್ನು ದೇಶಪ್ರೇಮದ ಅಪಹಾಸ್ಯ ಎಂದು ಕರೆದರು.
ಠಾಕ್ರೆ ಕುಟುಂಬದ ಮುಂಬೈ ನಿವಾಸ ಮಾತೋಶ್ರಿಯಲ್ಲಿ ಬಾಳಾ ಠಾಕ್ರೆ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಜಾವೇದ್ ಮಿಯಾನ್‌ದಾದ ಅವರ ನಡುವಿನ ಹಳೆಯ ಮಾತುಕತೆ ಉಲ್ಲೇಖಿಸಿದ ಉದ್ದವ್ ಠಾಕ್ರೆ, ‘‘ಭಾರತದ ವಿರುದ್ಧ ಪಾಕಿಸ್ತಾನ ಭಯೋತ್ಪಾದನೆ ಚಟುವಟಿಕೆಗಳನ್ನು ನಿಲ್ಲಿಸುವವರೆಗೆ ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತನ್ನ ತಂದೆ ಜಾವೇದ್ ಮಿಯಾನ್ ದಾದಾ ಅವರಿಗೆ ಹೇಳಿದ್ದರು’’ ಎಂದರು.